ಕಡಿಮೆ ಬಾಡಿಗೆಗೆ ತೆರಳುತ್ತಿದ್ದವ ಕೊಲೆಯಾಗಿ ಹೋದ; 12 ಗಂಟೆಯೊಳಗೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ ಪೊಲೀಸರು

Untitled-1
ಶವ ಪತ್ತೆಯಾದ ಸ್ಥಳ ಪರಿಶೀಲನೆಯಲ್ಲಿ ಪೊಲೀಸರು.
Published on

ಹಾಸನ: ಕೊಲೆ ಪ್ರಕರಣ ನಡೆದ ಹನ್ನೆರಡು ಗಂಟೆಯೊಳಗೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲಿಸರು, ಆತನನ್ನು ಬಂಧಿಸಿ ಕಂಬಿಯ ಹಿಂದಕ್ಕೆ ತಳ್ಳಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಸನ್ನ (31) ಬಂಧಿತ ಆರೋಪಿ. ನಿನ್ನೆ ಅರಕಲಗೂಡು ತಾಲೂಕಿನ ಮಲ್ಲಾಪುರ ಲಕ್ಕೂರು ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಜಗದೀಶ್​ (42) ಎಂಬಾತನನ್ನು ಪ್ರಸನ್ನ ಕೊಲೆ ಮಾಡಿದ್ದ.

ಜಗದೀಶ್ ಹಾಗೂ ಪ್ರಸನ್ನ ಇಬ್ಬರೂ ಆಪೆ ಆಟೋ ಇಟ್ಟುಕೊಂಡಿದ್ದು, ಇಬ್ಬರೂ ಪಿರಿಯಾಪಟ್ಟಣ-ರಾಮನಾಥಪುರ ಆಟೋ ಸ್ಟಾಂಡ್​​ನಿಂದ ಬಾಡಿಗೆಗೆ ಹೋಗುತ್ತಿದ್ದರು. ಜಗದೀಶ್​ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಿದ್ದ ಕಾರಣ, ಪ್ರಸನ್ನನಿಗೆ ಯಾವುದೇ ಆಟೋ ಬಾಡಿಗೆ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಜಗದೀಶ್ ಮೇಲೆ ಕೋಪಗೊಂಡಿದ್ದ ಪ್ರಸನ್ನ, ಗುರುವಾರ ರಾತ್ರಿ ರಾಮನಾಥಪುರಕ್ಕೆ ಆಟೋ ಬಾಡಿಗೆ ಇದೆ ಎಂದು ಜಗದೀಶ್​​ನನ್ನು ಕರೆದೊಯ್ದಿದ್ದ.

ಅಲ್ಲಿ ನಿರ್ಜನ ಪ್ರದೇಶದಲ್ಲಿ ಆಟೋ‌ ನಿಲ್ಲಿಸಿ ರಾಡಿನಿಂದ ಹಲ್ಲೆ ಮಾಡಿ, ನಂತರ ತಲೆಯ ಮೇಲೆ‌ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಕೊಲೆ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆ, ನಿನ್ನೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net