

ಮಂಗಳೂರು: ಚಿನ್ನಾಭರಣ ದರೋಡೆ ಮಾಡುವ ಉದ್ದೇಶದಿಂದ ಅಲ್ಲಿದ್ದ ಸಿಬ್ಬಂದಿಯನ್ನು ಇರಿದು ಕೊಲೆ ಮಾಡಿದ್ದಾಗಿ ಕೃತ್ಯ ಎಸಗಿದ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಶುಕ್ರವಾರ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕೇರಳದ ಕೋಝಿಕೋಡ್ ಚೇಮಂಚೇರಿಯ ಪೂಕಾಡ್ ನಿವಾಸಿ ಶಿಫಾಸ್ (30) ಬಂಧಿತ ಆರೋಪಿ. ಈತನನ್ನು ಗುರುವಾರ ಕಾಸರಗೋಡಿನಲ್ಲಿ ಕಾಸರಗೋಡು-ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಫೆ.3ರಂದು ಹಂಪನಕಟ್ಟೆ ಬಳಿ ಇರುವ ಮಂಗಳೂರು ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರದ ರಾಘವೇಂದ್ರ ಆಚಾರ್ಯ ಅವರನ್ನು ಹಾಡಹಗಲೇ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದ.
* ಮಂಗಳೂರಿನಲ್ಲಿ ಓದಿದ್ದ: ಆರೋಪಿ ಶಿಫಾಸ್ ಈ ಹಿಂದೆ ನಗರದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದಿದ್ದ. ಅಲ್ಲಿ ಬಿಇ ಕೋರ್ಸ್ ಮುಗಿಸದೆ ಎರಡು ವರ್ಷದಲ್ಲಿ ಕಾಲೇಜು ಬಿಟ್ಟು ಹೋಗಿದ್ದ. ಆನಂತರ, 2014ರಿಂದ 2019ರ ವರೆಗೆ ದುಬೈನಲ್ಲಿ ಕೆಲಸ ಮಾಡಿದ್ದ. ಮತ್ತೆ ಊರಿಗೆ ಬಂದು ಎಸ್‌ಎಎನ್‌ಎನ್ ಗ್ಲೋಬಲ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ.
ಕೊಲೆ ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಊರಿಗೆ ತೆರಳಿ ತಲೆಮರೆಸಿಕೊಂಡಿದ್ದ. ಈ ನಡುವೆ, ಮಂಗಳೂರು ಪೊಲೀಸರು ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿ ಕಾಸರಗೋಡು ಮೂಲಕ ತೆರಳಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಚಲನವಲನದ ಬಗ್ಗೆ ಅಲ್ಲಿನ ಪೊಲೀಸರ ಸಹಾಯದಿಂದ ನಿಗಾ ಇಟ್ಟಿದ್ದರು. ಸಿಸಿಟಿವಿಯಲ್ಲಿ ದೊರೆತ ಚಿತ್ರಗಳನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸಿ, ಈತನ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.
ಗುರುವಾರ ಕೋಝಿಕ್ಕೋಡ್‌ನಿಂದ ರೈಲು ಮೂಲಕ ಕಾಸರಗೋಡಿಗೆ ಬಂದಿದ್ದು, ಎರಡೆರಡು ಶರ್ಟ್ ಧರಿಸಿದ್ದ. ಮುಖಕ್ಕೆ ಮಾಸ್ಕ್ ಹಾಕಿದ್ದ. ಹಿಂದಿನ ರೀತಿಯಲ್ಲೇ ದರೋಡೆ ಉದ್ದೇಶದಿಂದ ಸ್ಕೆಚ್ ಹಾಕುತ್ತಿದ್ದ. ಇದೇ ವೇಳೆ, ಕಾಸರಗೋಡು ಪೊಲೀಸರು ಆರೋಪಿಯನ್ನು ಸಂಶಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ.
ಕುಟುಂಬದ ಜತೆ ವಾಸ: ಆರೋಪಿ ಶಿಫಾಸ್ ಕ್ಯಾಲಿಕಟ್ನಲ್ಲಿ ತಂದೆ, ತಾಯಿ, ಪತ್ನಿ ಮತ್ತು ಪುತ್ರಿಯ ಜೊತೆ ವಾಸ ಮಾಡುತ್ತಿದ್ದ. ಈತನ ಇಬ್ಬರು ಸೋದರರು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.