

ವಿಜಯವಾಣಿ ಸುದ್ದಿಜಾಲ ಕುಂದಾಣ
ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ತಂಡ ಭದ್ರತಾಸಿಬ್ಬಂದಿಯನ್ನು ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಶುಕ್ರವಾರ ವಿಶ್ವನಾಥಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ದೇವನಹಳ್ಳಿ ತಾಲೂಕಿನ ಬೋವಿಪಾಳ್ಯದ ನಿವಾಸಿ ಶ್ರೀನಿವಾಸ್ (32) ಮೃತ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜ, ತಿಮ್ಮರಾಜು, ಮನೋಜ ಹಾಗೂ ಮಂಜುನಾಥ್ ಎಂಬ ಆರೋಪಿಗಳನ್ನು ವಿಶ್ವನಾಥಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಣೇಶ ಹಬ್ಬದಲ್ಲಿ ಗಲಾಟೆ: ಗಣೇಶ ಹಬ್ಬದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ಆಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದವನ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಗೋವಿಂದ ಹಾಗೂ ಶ್ರೀನಿವಾಸ್ ಎಂಬುವರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು, ಇಬ್ಬರು ತಂಡಗಳನ್ನು ಕಟ್ಟಿಕೊಂಡು ಗುಂಡಾವರ್ತನೆ ಪ್ರದರ್ಶಿಸುತ್ತಿದ್ದರು ಎನ್ನಲಾಗಿದೆ. ಇದೇ ರೀತಿ ಕಳೆದ ಗಣೇಶ ಹಬ್ಬದಲ್ಲಿ ನ್ಯತ್ಯ ಮಾಡುವ ವಿಚಾರಕ್ಕೆ ಗೋವಿಂದ ಮತ್ತು ಶ್ರೀನಿವಾಸ್ ನಡುವೆ ಗಲಾಟೆ ನಡೆದಿತ್ತು. ಶ್ರೀನಿವಾಸ್‌ನನ್ನು ಹತ್ಯೆ ಮಾಡಲು ಸಂಚುರೂಪಿಸಿದ್ದ ಗೋವಿಂದ ಹಾಗೂ ಸಹಚರರು ಗುರುವಾರ ರಾತ್ರಿ ಕಾರ್ಖಾನೆಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಮೇಲೆ ಮುಗಿಬಿದ್ದಿದ್ದರು. ಮಾರಕಾಸಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದ. ಪ್ರಕರಣದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.