

ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಈಚೆಗೆ ತನ್ನ ವಿಚ್ಛೇದಿತ ಪತ್ನಿಯನ್ನು ಕೊಲೆ ಮಾಡಿರುವ ಆರೋಪಿ ಸಂತೋಷ ಕಾಂಬಳೆಯನ್ನು ಬಂಧಿಸಲಾಗಿದೆ. ಈತ ನಿಪ್ಪಾಣಿಯಲ್ಲಿ ಕಾನ್ಸಟೇಬಲ್ ಅಗಿದ್ದರೂ ಕರ್ತವ್ಯದಲ್ಲಿರಲಿಲ್ಲ, ಅಮಾನತುಗೊಂಡು ಇಲಾಖಾ ವಿಚಾರಣೆ ಎದುರಿಸುತ್ತಿದ್ದನು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಚೆಗೆ ಸವದತ್ತಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಕಾಶವ್ವ ಕರಿಕಟ್ಟಿ(35) ಮಾರಣಾಂತಿಕ ಹಲ್ಲೆಗೊಳಗಾಗಿ ಕೊಲೆಯಾಗಿದ್ದಳು. ಆಕೆ ಕೆಲಸಕ್ಕೆ ಬರದಿದ್ದಾಗ, ಸಿಬ್ಬಂದಿ ಫೋನ್ ಕರೆ ಮಾಡಿದ್ದರು. ಮೊದಲು ರಿಸೀವ್ ಮಾಡಿರಲಿಲ್ಲ. ಬಳಿಕ ಸ್ವಿಚ್ ಆಪ್ ಆಗಿತ್ತು. ಹೀಗಾಗಿ ಸಿಬ್ಬಂದಿಯೊಬ್ಬರು ಮನೆಗೆ ಬಂದು ನೋಡಿದಾಗ, ಆಕೆ ರಕ್ತಸಿಕ್ತವಾಗಿ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು ಎಂದು ವಿವರಿಸಿದರು.
ಈಕೆಯ ವಿಚ್ಛೇದಿತ ಪತಿ ಸಂತೋಷ ಕಾಂಬಳೆ ಕೊಲೆ ಮಾಡಿದ್ದು, ತನಿಖೆಯಲ್ಲಿ ಗೊತ್ತಾಗಿದೆ. ಈಗಾಗಲೇ ಬಂಧಿಸಲಾಗಿದೆ. ಜನೆವರಿ-ಫೆಬ್ರುವರಿ ಮಧ್ಯೆ ಕಾಶವ್ವಳ ಕೊಲೆಗೆ ಸಂತೋಷ ಯತ್ನಿಸಿದ್ದನು. ಸವದತ್ತಿ ಯಲ್ಲಮ್ಮ ಕ್ಷೇತ್ರದ ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾಗ, ಆಕೆ ಕರ್ತವ್ಯದಲ್ಲಿದ್ದ ಬಸ್ಸಿನಲ್ಲಿ ಗಲಾಟೆ ಮಾಡಿದ್ದನು. ಆಗ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅಮಾನತುಗೊಳಿಸಲಾಗಿತ್ತು. ಸದ್ಯ ಇಲಾಖಾ ವಿಚಾರಣೆ ಚಾಲ್ತಿಯಲ್ಲಿದೆ. ಈ ಪ್ರಕರಣ ಬಳಿಕ ಕೆಲ ತಿಂಗಳ ಹಿಂದೆ ವಿಚ್ಛೇದನ ಸಹ ಆಗಿತ್ತು. ಇವರಿಗೆ 10 ವರ್ಷದ ಓರ್ವ ಮಗನಿದ್ದಾನೆ. ಆತನನ್ನು ಪಡೆಯುವ ವಿಚಾರದಲ್ಲಿ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಈ ಜಗಳದಲ್ಲಿಯೇ ಕೊಲೆಯಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು.