

ಲೋಕಾಪುರ: ಸಮೀಪದ ಹೆಬ್ಬಾಳ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಮುಖ್ಯಶಿಕ್ಷಕರ ವರ್ತನೆ ಖಂಡಿಸಿ ವಿದ್ಯಾರ್ಥಿನಿಯರು ಶುಕ್ರವಾರ ಬೆಳಗ್ಗೆ ಉಪಾಹಾರ, ನೀರು ತ್ಯಜಿಸಿ ಶಾಲೆ ಗೇಟ್ ಮುಂದೆ ಪ್ರತಿಭಟಿಸಿದರು.
ಶಾಲೆ ಮುಖ್ಯಶಿಕ್ಷಕ ವಿಜಯಕುಮಾರ ಬಿರಾದಾರ ಅವರು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಬೈದು ಮೈಗೆ ಬಾರ ಮೂಡವಂತೆ ಬಡಿಯುತ್ತಾರೆ. ಊಟಾ ಕಡಿಮೆ ತಿನ್ನಿ, ಇದು ಹಾಸ್ಟೆಲ್.. ನಿಮ್ಮಪ್ಪನ ಮನೆ ಅಲ್ಲ ಎಂದು ಹಿಯಾಳಿಸುತ್ತಿದ್ದಾರೆ. ನಮ್ಮ ಪಾಲಕರಿಗೂ ಹಿಯಾಳಿಸಿ ಕಳುಹಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಸ್ಥಳಕ್ಕೆ ತಾಲೂಕು ಹಿಂದುಳಿದ ಅಧಿಕಾರಿ ಮಹಮ್ಮದ್‌ಹನೀಫ್ ತಹಸೀಲ್ದಾರ್, ಪಿಡಿಒ ಶ್ರೀನಿವಾಸ ಚಿಕರಡ್ಡಿ, ಕಾರ್ಯದರ್ಶಿ ಗ್ಯಾನು ರೊಡ್ಡಪ್ಪನವರ, ಗಾಮಲೆಕ್ಕಾಧಿಕಾರಿ ಕೊಳಚಿ, ಗ್ರಾಪಂ ಸದಸ್ಯರು, ಭೇಟಿ ನೀಡಿ ಸಮಸ್ಯೆ ಆಲಿಸಿ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಹಿಂಪಡೆಯಲು ಮನವೊಲಿಸಿದರಾದರೂ ಇದಕ್ಕೆ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟುಹಿಡಿದರು.
ಬಳಿಕ ಬಾಗಲಕೋಟೆ ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ ಎಂ.ಎಂ. ತುಮ್ಮರಮಟ್ಟಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದುಕೊಂಡರು.
ಮಹಿಳಾ ಮುಖ್ಯಶಿಕ್ಷಕಿಗೆ ನೇಮಿಸಿ: ಹೆಬ್ಬಾಳ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಹೆಸರು ಕೆಡಿಸುವ ಕೆಲಸವನ್ನು ಮುಖ್ಯಶಿಕ್ಷಕ ವಿಜಯಕುಮಾರ ಬಿರಾದಾರ ಮಾಡುತ್ತಿದ್ದಾರೆ. ತಮ್ಮ ತಪ್ಪನ್ನೂ ಅವರು ಒಪ್ಪಿಕೊಂಡಿದ್ದು, ಮೇಲಧಿಕಾರಿಗಳು ಅವರನ್ನು ಬೇರೆಡೆ ವರ್ಗಾಯಿಸಬೇಕು. ಶಾಲೆಗೆ ಮಹಿಳಾ ಮುಖ್ಯಶಿಕ್ಷಕಿ ಹಾಗೂ ಮಹಿಳಾ ವಾರ್ಡನ್ ನೇಮಿಸಬೇಕೆಂದು ಗ್ರಾಮಸ್ಥರಾದ ಗಡ್ಡೆಪ್ಪ ಬಾರಕೇರ, ಹಣಮಂತ ಗುರಜಟ್ಟಿ, ಮಾರುತಿ ವಡ್ಡರ, ಕರಬಸು ಹೊಸಕೋಟಿ ಒತ್ತಾಯಿಸಿದ್ದಾರೆ.
ಮುಖ್ಯಶಿಕ್ಷಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಬೇರೆಡೆ ವರ್ಗಾಯಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಪತ್ರ ಬರೆಯುತ್ತೇನೆ. ಸ್ಟಾಫ್ ನರ್ಸ್ ಅವರನ್ನೂ 15 ದಿನಗಳೊಳಗೆ ವರ್ಗಾಯಿಸಲಾಗುವುದು. ಉಳಿದ ಶಿಕ್ಷಕರಿಗೂ ನೋಟಿಸ್ ನೀಡಲಾಗುವುದು. ಇಲ್ಲಿನ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು.
ಎಂ.ಎಂ. ತುಮ್ಮರಮಟ್ಟಿ, ಬಾಗಲಕೋಟೆ ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ