ಮುದ್ದೇಬಿಹಾಳ: ತಾಲೂಕಿನ ಘಾಳಪೂಜಿಯಲ್ಲಿರುವ ಪರಿಶಿಷ್ಟ ಜಾತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಶಿವಲಿಂಗ ಕಾಂಬಳೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಸರ್ಕಾರದ ಅಂಗಸಂಸ್ಥೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಎ.ಎಸ್. ಅವರು ನ.29ರಂದೇ ಆದೇಶ ಹೊರಡಿಸಿದ್ದು ಅದರ ಪ್ರತಿ ಬುಧವಾರ ಪತ್ರಿಕೆಗೆ ಲಭ್ಯವಾಗಿದೆ.
ಕಳೆದ ನ.24 ರಂದು ಶಾಲೆಯ ಕಾಂಪೌಂಡ್ ಎದುರು ಅದೇ ಶಾಲೆಯ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಗೆ ಮೌನೇಶ ಮಾದರ ಎಂಬಾತ ಬಲವಂತವಾಗಿ ತಾಳಿ ಕಟ್ಟಿದ್ದ ಘಟನೆ ವಿಜಯವಾಣಿಯಲ್ಲಿ ಪ್ರಕಟಗೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ತಾಳಿ ಕಟ್ಟುವ ವಿಡಿಯೋ ಪ್ರಸಾರವಾಗಿದ್ದವು.
ನ.29 ರಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನಾ ವರದಿಯನ್ನು ಕ್ರೈಸ್‌ನ ಕೇಂದ್ರ ಕಚೇರಿಗೆ ಕಳಿಸಿದ್ದರು. ಘಟನೆ ನಡೆದ ದಿನ ವಾರ್ಡನ್ ಅವರು ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯದೆ, ವಸತಿ ನಿಲಯದ ಪ್ರಭಾರವನ್ನು ಯಾರಿಗೂ ವಹಿಸಿಕೊಡದೆ ಕೇಂದ್ರ ಸ್ಥಾನ ಬಿಟ್ಟಿರುವುದರಿಂದ ಆ ಘಟನೆ ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಅಮಾನತುಗೊಳಿಸಲಾಗಿದೆ.
ವಾರ್ಡನ್ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ ಮೇಟಿ ಅವರಿಗೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ವಹಿಸಿಕೊಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.