

ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿಯಲ್ಲಿ ನಡೆದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ತೆರಕಣಾಂಬಿಯ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಈ ಬಾರಿಯ ಸ್ಪರ್ಧೆಯಲ್ಲಿ ಪಡಗೂರು, ವಡ್ಡಗೆರೆ, ತೆರಕಣಾಂಬಿ ಕ್ಲಸ್ಟರ‌್ಗಳ 11 ಶಾಲೆಗಳು ಭಾಗವಹಿಸಿದ್ದವು. ತೆರಕಣಾಂಬಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಂದಿತಾ ಇಂಗ್ಲಿಷ್ ಹಾಗೂ ಕನ್ನಡ ಭಾಷಣದಲ್ಲಿ ಪ್ರಥಮ, ಹಿಂದಿ ಭಾಷಣದಲ್ಲಿ ತ್ರಿವೇಣಿ ಪ್ರಥಮ, ಮಿಮಿಕ್ರಿಯಲ್ಲಿ ಜೀವಿತಾ, ಮಾನ್ಯಾಶ್ರೀ ತಂಡ ಜಾನಪದ ನೃತ್ಯದಲ್ಲಿ ಪ್ರಥಮ,
ಜಾನಪದ ಗೀತೆಯಲ್ಲಿ ಅಮೂಲ್ಯಾ ದ್ವಿತೀಯ, ಚರ್ಚಾಸ್ಪರ್ಧೆಯಲ್ಲಿ ಸಂಜನಾ, ಕವನ ವಾಚನ ಸ್ಪರ್ಧೆಯಲ್ಲಿ ಮೌಲ್ಯ, ಕವ್ವಾಲಿಯಲ್ಲಿ ಮೇಘನಾ ತಂಡ, ಗಝಲ್‌ನಲ್ಲಿ ಮೇಘನಾ, ಉರ್ದು ಭಾಷಣ ಪರ್ವಿನ್ತಾಜ್, ಆಶುಭಾಷಣ ಸ್ಪರ್ಧೆಯಲ್ಲಿ ದೀಕ್ಷಿತಾ, ಚಿತ್ರಕಲೆಯಲ್ಲಿ ಮೀನಾಕ್ಷಿ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಹರೀಶ್ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರನ್ನು ಶಾಲಾ ಪ್ರಾಂಶುಪಾಲ ಮಹದೇವ ಪ್ರಸಾದ್ ಹಾಗೂ ಸಹಶಿಕ್ಷಕರು ಅಭಿನಂದಿಸಿದ್ದಾರೆ.