

* ಹೊಸಪೇಟೆ ನಗರಸಭೆ ಮೂಲೆ ಸೇರಿದೆ ಪ್ರತಿಮೆ
* ಅಧಿಕಾರಿಗಳು, ಜನಪ್ರತಿನಿಧಿಗಳಿಗಿಲ್ಲ ಕಾಳಜಿ
ಹೊಸಪೇಟೆ ನಗರದ ಸೌಂದರ್ಯೀಕರಣ, ಬಡ ಮಕ್ಕಳ ಶಿಕ್ಷಣಕ್ಕಾಗಿ ಸ್ವಂತ ಜಾಗೆಯನ್ನೇ ಧಾರೆಯೆರೆದ ಅಂದಿನ ಪುರಸಭೆ ಅಧ್ಯಕ್ಷ ಮುರಾರಿ ಶ್ರೀರಾಮುಲು ಅವರ ಪ್ರತಿಮೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಳೇ ಬಸ್ ನಿಲ್ದಾಣ ತೆರವು ವೇಳೆ ನಗರಸಭೆಗೆ ಸ್ಥಳಾಂತರಿಸಿದ್ದ ಪುತ್ಥಳಿ ಇಂದಿಗೂ ಮರು ಸ್ಥಾಪಿಸಿಲ್ಲ. ಕೆಲ ವರ್ಷಗಳಿಂದ ನಗರಸಭೆಯ ಯಾವುದೋ ಮೂಲೆಯಲ್ಲಿ ಧೂಳು ತಿನ್ನುತ್ತಿರುವುದು ನಗರಾಡಳಿತದ ಕಾರ್ಯವೈಖರಿಯನ್ನು ಸಾರುತ್ತದೆ.
ಹೊಸಪೇಟೆಗೆ ಶ್ರೀರಾಮುಲು ಕೊಡುಗೆ ಏನು?
೧೯೬೦ ರಲ್ಲಿ ಮುರಾರಿ ಶ್ರೀರಾಮುಲು ಅವರು ಹೊಸಪೇಟೆ ಪುರಸಭೆ ಅಧ್ಯಕ್ಷರಾಗಿದ್ದರು. ಅಲ್ಲದೇ, ಅವರ ಪತ್ನಿ ಮುರಾರಿ ಕಮಲಮ್ಮ
ಶಾಸಕಿಯಾಗಿದ್ದರು. ತಮ್ಮ ಅವಧಿಯಲ್ಲಿ ಅನೇಕ ಜನೋಪಯೋಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಸ್ಟೇಷನ್ ರಸ್ತೆಯಲ್ಲಿ ಬೃಹತ್ ಉದ್ಯಾನವನ್ನು ನಿರ್ಮಾಣ, ಪಟೇಲ್ ರಸ್ತೆಯಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ತಮ್ಮ ಸ್ವಂತ ನಿವೇಶನವನ್ನು ಬಿಟ್ಟುಕೊಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ನವೀಕರಣಗೊಂಡಿರುವ ಉದ್ಯಾನ ಇಂದಿಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಶ್ರೀರಾಮುಲು ಸರ್ಕಾರಿ ಶಾಲೆ ಇಂದಿಗೂ ಬಡ ಮಕ್ಕಳಿಗೆ ಜ್ಞಾನ ಜ್ಯೋತಿ ಬೆಳಗುತ್ತಿದೆ.
ಪರಿಶಿಷ್ಟ ಜನರ ವಾಸಕ್ಕಾಗಿ ಇಂದಿರಾ ನಗರ ನಿರ್ಮಿಸಿ, ನೂರಾರು ಬಡ ವರ್ಗದ ಜನರಿಗೆ ಸೂರು ಕಲ್ಪಿಸಿದೆ. ಇದು ಮುರಾರಿ ಶ್ರೀರಾಮುಲು ಅವರ ದೂರದೃಷ್ಟಿಯನ್ನು ಸಾರುತ್ತದೆ.
ಅಂತಹ ಜನ ಸೇವಕನ ಪುತ್ಥಳಿಯನ್ನು ಮೂಲೆ ಸೇರುವಂತೆ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
ಪ್ರತಿಮೆ ಮೂಲೆ ಸೇರಿದ್ದು ಹೀಗೆ:
ನಗರದ ಅಭಿವೃದ್ಧಿಯ ಹರಿಕಾರ ಮುರಾರಿ ಶ್ರೀರಾಮುಲು ಅವರ ಕೊಡುಗೆಯನ್ನು ಸ್ಮರಣೀಯವಾಗಿಸಲು ದಶಕಗಳ ಹಿಂದೆ ಹಳೇ ಬಸ್ ನಿಲ್ದಾಣ ಆವರಣದಲ್ಲಿ ಪ್ರತಿಮೆ ಸ್ಥಾಪಿಸಲಾಗಿತ್ತು. ಅದೇ ಜಾಗದಲ್ಲಿ ತರಕಾರಿ ಮಾರುಕಟ್ಟೆಯನ್ನಾಗಿಸುವ ಉದ್ದೇಶದಿಂದ ಪುತ್ಥಳಿಯನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಅದನ್ನು ನಗರಸಭೆಗೆ ಸ್ಥಳಾಂತರಿಸಲಾಯಿತು.
ಮುರಾರಿ ಅವರ ಪ್ರತಿಮೆಯನ್ನು ಮರು ಸ್ಥಾಪಿಸಲಾಗುವುದು ಎಂದು ಆನಂತರ ೨೦೦೯ರಲ್ಲಿ ನವೀಕೃತ ಶ್ರೀರಾಮುಲು ಉದ್ಯಾನ ಉದ್ಘಾಟನೆ ವೇಳೆ ಪ್ರವಾಸೋದ್ಯಮ ಸಚಿವರಾಗಿದ್ದ ಆನಂದ ಸಿಂಗ್ ಭರವಸೆ ನಿಡಿದ್ದರು. ಆದರೆ, ದಶಕ ಕಳೆದರೂ ಭರವಸೆ ಈಡೇರಿಲ್ಲ. ಇಂದಿಗೂ ನಗರಸಭೆಯ ಮೂಲೆಯೊಂದರಲ್ಲಿ ಮುರಾರಿ ಶ್ರೀರಾಮುಲು ಅವರ ಪುತ್ಥಳಿ ಧೂಳು ತಿನ್ನುತ್ತಿದೆ ಎಂಬುದು ವಿಪರ್ಯಾಸ.
ದಶಕಗಳ ಹಿಂದೆ ಪುತ್ಥಳಿಯನ್ನು ತೆರವುಗೊಳಿಸಿದ್ದು, ಅದನ್ನು ಮುರಾರಿ ಶ್ರೀರಾಮುಲು ಪಾರ್ಕ್‌ಗೆ ಸ್ಥಳಾಂತರಿಸಲಾಗುವುದು ಎಂದು ೨೦೦೯ರಲ್ಲಿ ಸಚಿವ ಆನಂದ ಸಿಂಗ್ ಭರವಸೆ ನೀಡಿದ್ದರು. ಈ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಸ್ಪಂದಿಸುತ್ತಿಲ್ಲ.
- ಎಂ.ಧರ್ಮಕೀರ್ತಿ, ಮುರಾರಿ ಶ್ರೀರಾಮುಲು ಅವರ ಪುತ್ರ.