ಮುರಘೇಂದ್ರ ಶಿವಯೋಗಿಗಳ ಕೊಡುಗೆ ಅಪಾರ

rbk 9-1
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಮಂಗಳವಾರ ರಾತ್ರಿ ನಡೆದ ಬ್ರಹ್ಮಾನಂದರ ಉತ್ಸವ ಸಮಾರಂಭದಲ್ಲಿ ಶ್ರೀಮಠದ ಗುರುಸಿದ್ಧೇಶ್ವರ ಶ್ರೀಗಳು ರಚಿಸಿದ ‘ಅನುಭಾವ ನಿವೇದನೆ’ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ಮೆಳ್ಳಿಗೇರಿ ಅಮ್ಮಲಝರಿ ಜ್ಞಾನಮಯಾನಂದ ಸ್ವಾಮಿಗಳು, ಬೆಳವಿ ಚರಂತೇಶ್ವರ ವಿರಕ್ತಮಠದ ಶರಣಬಸವ ದೇವರು ಇತರರಿದ್ದರು.
Published on

ರಬಕವಿ/ಬನಹಟ್ಟಿ: ಬೆಳಗಾವಿ ಜಿಲ್ಲೆಯ ಅಥಣಿ ನಗರದ ಗಚ್ಚಿನಮಠ ಅನೇಕ ಶ್ರೇಷ್ಠ ಸಾಧಕರನ್ನು ನಾಡಿಗೆ ನೀಡಿದ ಮಹಾನ್ ಮಠವಾಗಿದೆ ಎಂದು ಬೆಳವಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣಬಸವ ದೇವರು ಹೇಳಿದರು.

ಮಂಗಳವಾರ ರಾತ್ರಿ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆಯುತ್ತಿರುವ ಬ್ರಹ್ಮಾನಂದ ಉತ್ಸವ ಸಮಾರಂಭದಲ್ಲಿ ಶ್ರೀ ಮಠದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ರಚಿಸಿದ ‘ಅನುಭಾವ ನಿವೇದನೆ’ ಎಂಬ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಸಮಾನತೆಯ ದಷ್ಟಿಯಲ್ಲಿ ಹೆರ್ಡೇಕರ ಮಂಜಪ್ಪನವರಿಗೆ ಲಿಂಗದೀಕ್ಷೆ ನೀಡಿದ ಇವರು, ಅಷ್ಟೇ ಅಲ್ಲ ಸ್ವತಂತ್ರ್ಯ ಹೋರಾಟಗಾರ ಬಾಲಗಂಗಾಂಧರ ತಿಲಕ, ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ, ಕೆ.ಎಲ್.ಇ ಸಂಸ್ಥಾಪಕರಲ್ಲೊಬ್ಬ ಮತ್ತು ದಾನಿ ಶಿರಸಂಗಿ ಲಿಂಗರಾಜರಿಗೆ ಮಾರ್ಗದರ್ಶನ ನೀಡಿದ ಕೀರ್ತಿ ಅಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.

ಮೆಳ್ಳಿಗೇರಿ ಅಮ್ಮಲಝರಿ ಶ್ರೀ ಜ್ಞಾನಮಯಾನಂದ ಸ್ವಾಮಿಗಳು ಮಾತನಾಡಿ, ಮುರುಘೇಂದ್ರ ಶಿವಯೋಗಿಗಳು ಶಿವಶರಣರ ವಚನ ಸಾಹಿತ್ಯವನ್ನು ತಲೆ ಮೇಲೆ ಹೊತ್ತು ಜನರಲ್ಲಿ ಜಾಗೃತಿ ಮೂಡಿಸಿದರು. ವಚನ ಸಾಹಿತ್ಯ ಬಿಟ್ಟು ಬೇರೆ ಇನ್ನಾವುದೇ ಸಾಹಿತ್ಯವನ್ನು ಶಿವಯೋಗಿಗಳು ಓದಲೇ ಇಲ್ಲ. ಅದಕ್ಕಾಗಿಯೇ ಅವರು ಬಸವಣ್ಣನವರನ್ನು ಅಪ್ಪ ಎಂದು ಸಂಬೋಧಿಸುತ್ತಿದ್ದರು ಎಂದ ಅವರು ಇಂತಹ ಮಹಾನ್ ಸಾಧಕ ಮುರುಘೇಂದ್ರ ಶಿವಯೋಗಿಗಳ ಜೀವನ ದರ್ಶನ ನಮಗೆಲ್ಲ ಮಾದರಿ ಎಂದರು.

ಅನುಭಾವ ನಿವೇದನೆ ಗ್ರಂಥ ಸಂಪಾದನೆ ಮಾಡಿದ ಕಾಲತಿಪ್ಪಿ ಶಿವಾನಂದ ಮರೇಗುದ್ದಿ, ಜಮಖಂಡಿ ಬಸವಜ್ಯೋತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಬಸವರಾಜ ಕಡ್ಡಿ ಗ್ರಂಥ ಪರಿಚಯಿಸಿ ಮಾತನಾಡಿ, ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಮ್ಮ ಪೀಠಾರೋಹಣ ನಂತರ ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಯಂದು ನಡೆದ ಅನುಭಾವದಂಗಳ ಆಧ್ಯಾತ್ಮಿಕ ಪ್ರವಚನದ ಸಾರ ಇದಾಗಿದೆ. ಪ್ರವಚನ ನೀಡಿದ ನಾಡಿನ ಹರಗುರು ಚರಮೂರ್ತಿಗಳಿಂದ ಭಕ್ತರಿಗೆ ಉಣಬಡಿಸಿದ ಆಧ್ಯಾತ್ಮಿಕ ಅನುಭವ ಅಮೃತ ಈ ಗ್ರಂಥದಲ್ಲಿದೆ ಎಂದು ತಿಳಿಸಿದರು.

ಶ್ರೀಮಠದ ಗುರುಸಿದ್ಧೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಿತ್ತಲಿ ಸಿದ್ರಾಮೇಶ್ವರಮಠದ ಮಂಜುನಾಥ ದೇವರು ನೇತೃತ್ವ ವಹಿಸಿದ್ದರು. ಜಮಖಂಡಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಜಿ. ನಿಂಗಪ್ಪ, ಗಿರೀಶ ಮುತ್ತೂರ, ವಿರುಪಾಕ್ಷಯ್ಯ ಹಿರೇಮಠ, ಡಾ.ವಿನೋದ ಮೇತ್ರಿ ಇತರರಿದ್ದರು.

ಬಳಿಕ ರಬಕವಿ ಲಿಟಲ್ ಹಾರ್ಟ್ ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತನುಮನಧನದಿಂದ ಸಹಾಯ ಮಾಡಿದವರನ್ನು ಮತ್ತು ಅನೇಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net