

ಮುಂಡರಗಿ: ತಾಲೂಕಿನ ಮುರಡಿ ಗ್ರಾ.ಪಂ.ವ್ಯಾಪ್ತಿಯ 14 ಸ್ಥಾನಗಳಿಗೆ ಜು.23ರಂದು ನಡೆದ ಚುನಾವಣೆಯ ಫಲಿತಾಂಶವು ಬುಧವಾರ ಪ್ರಕಟವಾಯಿತು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಮತ ಎಣಿಕೆ ನಡೆಸಲಾಯಿತು. ಚುನಾವಣೆ ಅಧಿಕಾರಿಯಾಗಿ ದುರ್ಗಾಪ್ರಸಾದ ಡಿ., ಮತಎಣಿಕೆ ಮೇಲ್ವಿಚಾರಕರಾಗಿ ಉಪ ತಹಸೀಲ್ದಾರರಾದ ಎಸ್.ಎಸ್.ಬಿಚ್ಚಾಲಿ, ಸಿ.ಕೆ. ಬಳೂಟಗಿ ಕಾರ್ಯ ನಿರ್ವಹಿಸಿದರು.
ಮುರಡಿ ಗ್ರಾ.ಪಂ.ಗೆ ಶೋಭಾ ಕೊಡ್ಲಿ, ಗಿರಿಜವ್ವ ಅಂಗಡಿ, ವಸಂತ ಮಾಳಗಿಮನಿ, ರತ್ನವ್ವ ಕಾರಭಾರಿ, ಉಮೇಶ ರಾಠೋಡ, ಲಲಿತಾ ಪವಾರ, ಹನಮಂತ ಕಡಕೋಳ, ರೇಖಾ ಭಜಂತ್ರಿ, ಬಸಪ್ಪ ಮಾಯಣ್ಣವರ, ಲಕ್ಷ್ಮವ್ವ ಕರಿ, ಬಸಪ್ಪ ತಿಮ್ಮಣ್ಣವರ, ಲಕ್ಷ್ಮೀ ಬಿನ್ನಾಳ, ಲಕ್ಷ್ಮವ್ವ ಹನಕನಹಳ್ಳಿ, ಕೇಶಪ್ಪ ತಳವಾರ ಅವರು ಗೆಲವು ಸಾಧಿಸಿದ್ದಾರೆ.
ವಿಜೇತ ಅಭ್ಯರ್ಥಿಗಳಿಗೆ ಅವರ ಬೆಂಬಲಿಗರು, ಕಾರ್ಯಕರ್ತರು ಹೂಮಾಲೆ ಹಾಕಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಚುನಾವಣೆ ವಿಳಂಭ ಯಾಕೆ..? 2015ರಲ್ಲಿ ಮುಂಡರಗಿ ತಾಲೂಕಿನಲ್ಲಿ ನೂತನ ಗ್ರಾ.ಪಂ.ರಚನೆ ವೇಳೆ ತಮ್ಮ ಗ್ರಾಮವನ್ನು ಕಡೆಗಣಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಮುರಡಿ ಗ್ರಾ.ಪಂ.ವ್ಯಾಪ್ತಿಯ ಚಿಕ್ಕವಡ್ಡಟ್ಟಿ ಗ್ರಾಮಸ್ಥರು ಸಾಮೂಹಿಕವಾಗಿ ಗ್ರಾ.ಪಂ.ಚುನಾವಣೆ ಸೇರಿ ಇತರೆ ಚುನಾವಣೆಗಳನ್ನು ಬಹಿಷ್ಕರಿಸಿದ್ದರು. ನಂತರ 2018ರಲ್ಲಿ ಮುರಡಿ ಗ್ರಾ.ಪಂ.ಗೆ ಚುನಾವಣೆ ನಡೆಸಲಾಗಿತ್ತು. ತಡವಾಗಿದ್ದರಿಂದ, ಐದು ವರ್ಷದ ನಂತರ ಮತ್ತೆ ಈಗ ಚುನಾವಣೆ ನಡೆಸಲಾಯಿತು.
ಉಪ ಚುನಾವಣೆ: ಡೋಣಿ ಗ್ರಾ.ಪಂ.ನಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದಿದ್ದ ಉಪ ಚುನಾವಣೆಯ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, ಕಮಲಾಕ್ಷಿ ಕೊರವರ ಗೆಲುವು ಸಾಧಿಸಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಜಿ.ಎಸ್. ಅಣ್ಣಿಗೇರಿ, ಮತ ಎಣಿಕೆ ಮೇಲ್ವಿಚಾರಕರಾಗಿ ಉಪ ತಹಸೀಲ್ದಾರರಾದ ಎಸ್.ಎಸ್.ಬಿಚ್ಚಾಲಿ, ಸಿ.ಕೆ.ಬಳೂಟಗಿ ಕಾರ್ಯನಿರ್ವಹಿಸಿದರು.