ಮುಪ್ಪಿನ ಬಸವಲಿಂಗ ಶ್ರೀಗಳ ಅಧಿಕಾರ ಸ್ವೀಕಾರ ನಾಳೆ

230322 Muppina Basavalinga Swami
ಕೊಟ್ಟೂರು ಬಸವಲಿಂಗ ಸ್ವಾಮೀಜಿ
Published on

ಹೊಸಪೇಟೆ: ನಗರದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ 20ನೇ ಜಗದ್ಗುರುಗಳಾಗಿ ಶ್ರೀ ಮನಿಪ್ರ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿಗಳು ಮಾ.24 ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ನಾಡಿನ ಅನೇಕ ಮಠಾಧಿಶರ ಸಮ್ಮುಖದಲ್ಲಿ ಹಂಪಿ ಹೇಮಕೂಟ ಶೂನ್ಯಸಿಂಹಾಸನ ಪೀಠಾರೋಹಣದೊಂದಿಗೆ ಅಧಿಕಾರ ಸ್ವೀಕರಿಸಲಿದ್ದಾರೆ.

ಹುಬ್ಬಳ್ಳಿ ಸಮೀಪದ ಕುಸುಗಲ್ಲ ಗ್ರಾಮದ ವೀರೇಶ ಬೆಳ್ಳೇರಿಮಠ ಹಾಗೂ ನೇತ್ರಾವತಿ ಇವರ ಏಕೈಕ ಪುತ್ರರಾಗಿ 6 ಅಕ್ಟೋಬರ್ 1993ರಲ್ಲಿ ಜನಿಸಿದ ಇವರಿಗೆ ವಿಜಯಕುಮಾರ ಬೆಳ್ಳೇರಿಮಠ ಎಂದು ನಾಮಕರಣ ಮಾಡಲಾಯಿತು. 2008ರಲ್ಲೆ ಶಿವಯೋಗ ಸಂಸ್ಥೆಗೆ ವಟುವಾಗಿ ಶಿಕ್ಷಣ ಪಡೆಯಲು ಸೇರಿದರು. ಡಾ.ಸಂಗನಬಸವ ಸ್ವಾಮೀಜಿಗಳ ಬೆಂಬಲ, ಅಶೀರ್ವಾದ ಶ್ರೀರಕ್ಷೆಯೊಂದಿಗೆ ಶಿವಯೋಗ ಶಿಕ್ಷಣ ಪೂರೈಸಿ, ಸಂಸ್ಕೃತ, ಯೋಗ, ಸಂಗೀತ ಸೇರಿ ನಾನಾ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಕನ್ನಡ, ಇಂಗ್ಲೀಷ್, ಸಂಸ್ಕೃತ ಭಾಷೆಗಳ ಜ್ಞಾನ ಸಂಪಾದಿಸಿದ್ದಾರೆ. ಬಾಲ್ಯದಲ್ಲಿಯೇ ಶಿವಯೋಗ ಎಂಬ ಹಸ್ತಪ್ರತಿ ಗ್ರಂಥವನ್ನು ಜಾತ್ರಾ ಸಮಯದಲ್ಲಿ ವರ್ಷಕ್ಕೊಂದರಂತೆ ಹೊರಡಿಸಿದ ಹೆಗ್ಗಳಿಕೆ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳದ್ದಾಗಿದೆ. ಸಮಾಜ ಹಾಗೂ ಗುರುವಿನ ಸೇವೆ ದೊರೆಯುವುದು ದುರ್ಲಬವೆಂದು ಅರಿತಿದ್ದ ಇವರು ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿಗಳ ಸ್ವಾಸ್ಥ್ಯ ಸಂಬಂಧವಾಗಿ ಹಗಲಿರುಳು ಕಾಯಾ, ವಾಚಾ, ಮನಸಾ ತ್ರಿಕರಣಪೂರ್ವಕವಾಗಿ ಸೇವೆ ಸಲ್ಲಿಸಿದ್ದಾರೆ.

ಸದಾ ಅದ್ಯಯನ ಶೀಲರೂ, ಲಿಂಗಾಪೂಜಾ ಲೋಲರು ಆದ ಪೂಜ್ಯರು ಹಗಲಿರುಳು ಸಮಾಜ ಪರ ಚಿಂತನೆಗೈಯುವ ಯುವ ಯತಿಗಳಾಗಿದ್ದಾರೆ. ಲಿಂ.ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳವರ ಇಚ್ಚೆಯಂತೆ ಮತ್ತು ಅವರ ತರುವಾಯ ಹಾಲಕೆರೆ-ಹೊಸಪೇಟೆ-ಬಳ್ಳಾರಿ-ಹಂಪೆ ಶ್ರೀಮಠಗಳ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳೆಂಬ ನಾಮಾಂಕಿತದೊಂದಿಗೆ ಉತ್ತರಾಧಿಕಾರಿಯಾಗುತ್ತಿರುವುದು ಇವರ ಯೋಗಾ-ಯೋಗವಾಗಿದೆ ಎಂದು ಹೇಳುತ್ತಾರೆ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ವಿ.ಶರಣಸ್ವಾಮಿ ಮತ್ತು ಕಾರ್ಯದರ್ಶಿ ಕೆ.ರವಿಶಂಕರ, ಶ್ರೀಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಾಲಿ ಸಿದ್ದಯ್ಯಸ್ವಾಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net