

ಶಿಡ್ಲಘಟ್ಟ: ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಂತಹ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಒಂದು ಶಕ್ತಿಯಿದ್ದಂತೆ. ಅವರ ಶಕ್ತಿಯನ್ನು ಬಳಸಿಕೊಳ್ಳದ ಆ ಪಕ್ಷದ ನಾಯಕರು ನಿಜವಾದ ನತದೃಷ್ಟರು ಎನ್ನುವ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮುನಿಯಪ್ಪ ಅವರನ್ನು ಹಾಡಿ ಹೊಗಳಿದರು.
ಮಾಜಿ ಸಂಸದ ಕೆ.ಎಸ್.ಮುನಿಯಪ್ಪರ ಸ್ವಗ್ರಾಮ ತಾಲೂಕಿನ ಕಂಬದಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದೇವತೆ ಕಾಳಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಕೆ.ಎಚ್.ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಕೆ.ಎಚ್.ಮುನಿಯಪ್ಪ ಪಾತ್ರ ಮಹತ್ವದ್ದಾಗಿದೆ. ಅವರು ಯಾವುದೇ ಪಕ್ಷದಲ್ಲಿರಲಿ, ಆ ಪಕ್ಷಕ್ಕೆ ಶಕ್ತಿಯಾಗಿ ದುಡಿಯುತ್ತಾರೆ. ಅವರ ಶಕ್ತಿಯನ್ನು ಬಳಸಿಕೊಳ್ಳದವರು ನಿಜವಾಗಿಯೂ ನತದೃಷ್ಟರು. ಒಂದು ವೇಳೆ ಅವರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದರೆ ಅವರನ್ನು ಬರಮಾಡಿಕೊಳ್ಳುವ ಪಕ್ಷದವರು ನಿಜವಾಗಿಯೂ ಭಾಗ್ಯವಂತರು ಎಂದರು.
ಕಳೆದೆರಡು ತಿಂಗಳ ಹಿಂದೆಯಷ್ಟೇ ಗ್ರಾಮದೇವತೆ: ಕಾಳಿಕಾಂಬಾ ದೇವಾಲಯದ ಪ್ರತಿಷ್ಠಾಪನೆ ನಡೆಸಿದ್ದು, ಗ್ರಾಮಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಳ್ಳುವಂತೆ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಸದ್ಯಕ್ಕೆ ನಮ್ಮ ಭೇಟಿಯನ್ನು ರಾಜಕೀಯವಾಗಿ ಬಿಂಬಿಸುವುದು ಬೇಡ ಎಂದರು.
ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಗ್ರಾಮದೇವತೆ ಕಾಳಿಕಾಂಬಾ ದೇವಿಯ ಅನುಗ್ರಹದಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಹೋಗಲು ಸಾಧ್ಯವಾಯಿತು. ಕಳೆದ 50 ವರ್ಷಗಳಿಂದ ಡಾ.ಕೆ.ಸುಧಾಕರ್ ಕುಟುಂಬಕ್ಕೂ ನಮಗೂ ಉತ್ತಮ ನಂಟಿರುವುದರಿಂದ ಜಾತ್ರಾ ಮಹೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದೆ. ಡಾ.ಕೆ.ಸುಧಾಕರ್ ಸೇರಿದಂತೆ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸೇರಿ ಎರಡೂ ಜಿಲ್ಲೆಗಳ ವಿವಿಧ ಪಕ್ಷಗಳ ಮುಖಂಡರು ಆಗಮಿಸಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ, ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಿರ್ಧಾರ ತಿಳಿಸುತ್ತೇನೆ ಎಂದರು. ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮುಖಂಡ ಬಿಸ್ಸೇಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಇದ್ದರು.
ಜಿಲ್ಲೆಗೆ ರಮೇಶ್‌ಕುಮಾರ್ ಕೊಡುಗೆ ಏನು?: ಕಳೆದ 3 ದಶಕಗಳಿಂದ ಕೆ.ಎಚ್.ಮುನಿಯಪ್ಪ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಮಾಡಲು ಶ್ರಮಿಸಿದ್ದಾರೆ. ವಿವಿಧ ಪಕ್ಷಗಳ ಬಾಗಿಲು ಬಡಿಯುತ್ತಿದ್ದ ರಮೇಶ್‌ಕುಮಾರ್ ಅವರನ್ನು ಪಕ್ಷಕ್ಕೆ ಕರೆತಂದ ಕಾರಣಕ್ಕೆ ಅವರು ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆಯೇ ಹೊರತು ಅವರಿಂದ ಪಕ್ಷಕ್ಕಾಗಲಿ, ಜಿಲ್ಲೆಗಾಗಲಿ ಯಾವುದೇ ಕೊಡುಗೆಯಿಲ್ಲ ಎಂದು ಸಚಿವ ಸುಧಾಕರ್ ಟೀಕಿಸಿದರು.
ಮುನಿಯಪ್ಪ ಬಿಜೆಪಿಗೇ ಸೇರ‌್ತಾರಾ?: ಇತ್ತೀಚೆಗಷ್ಟೇ ತಮ್ಮ ಬೆಂಬಲಿಗರ ಬೃಹತ್ ಸಭೆ ಕರೆದು ಕಾಂಗ್ರೆಸ್ ವರಿಷ್ಠರಿಗೆ ಗಡುವು ನೀಡಿದ್ದ ಕೆ.ಎಚ್.ಮುನಿಯಪ್ಪ ಇಂದು ಬಿಜೆಪಿಯ ಡಾ.ಕೆ.ಸುಧಾಕರ್ ಸೇರಿ ವಿವಿಧ ಸಚಿವರು ಹಾಗೂ ಜೆಡಿಎಸ್‌ನ ಹಾಲಿ, ಮಾಜಿ ಶಾಸಕರನ್ನು ತಮ್ಮ ನಿವಾಸಕ್ಕೆ ಕರೆಸಿರುವುದು ಕ್ಷೇತ್ರದ ಜನತೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಮೊನ್ನೆ ಮೊನ್ನೆಯಷ್ಟೇ ಮುನಿಯಪ್ಪ ಜೆಡಿಎಸ್‌ಗೆ ಹೋಗ್ತಾರಂತೆ ಎನ್ನುತ್ತಿದ್ದ ಜನರು ಇದೀಗ ಕೆ.ಎಚ್.ಮುನಿಯಪ್ಪ ಅವರು ಬಿಜೆಪಿಗೇ ಸೇರ‌್ತಾರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಾರು ಏನು ಹೇಳಿದರೂ ಕೆ.ಎಚ್.ಮುನಿಯಪ್ಪ ಮಾತ್ರ ಗುಟ್ಟು ಬಿಟ್ಟು ಕೊಟ್ಟಿಲ್ಲ.