

ಕೋಲಾರ: ಗ್ರಾಮೀಣ ಭಾಗದಲ್ಲಿರುವ ಕಲಾವಿದರನ್ನು ಗುರುತಿಸುವ ಹಾಗೂ ಸಮಾಜದ ಮುಖ್ಯವಾಹಿನಿಗೆ ಕರೆತರುವಂತಹ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೆಚ್ಚು ಆಯೋಜಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ತಾಲೂಕಿನ ವಕ್ಕಲೇರಿ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗ್ರಾಪಂ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜನಪದ ಜಾತ್ರೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಕಲಾವಿದರು ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿನ ಪ್ರತಿಭೆಗಳನ್ನು ಗುರುತಿಸುವ ಕೆಲಸ ಗ್ರಾಮೀಣ ಮಟ್ಟದಿಂದ ನಡೆಯುವಂತಾದರೆ ಕಲಾವಿದರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ರಾಜಕೀಯ ಪಕ್ಷಗಳ ಸಂಖ್ಯೆಗಿಂತ ಕಲಾವಿದರ ಗುಂಪು ಇದೆ. ಜಾನಪದದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮೈಸೂರು ದಸರಾದಲ್ಲೂ ಕಲಾ ತಂಡಗಳು ಭಾಗಿಯಾಗಿ ಮೆರಗು ನೀಡುತ್ತಿರುವುದು ಶ್ಲಾಘನೀಯ. ಕಲಾವಿದರ ಕುಂದುಕೊರತೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಕನ್ನಡವೇ ಜಾತಿ, ದೇವರು, ಧರ್ಮ ಎಂಬ ಅಡಿಯಲ್ಲಿ ಜನಪದ ಜಾತ್ರೆ ನಡೆಯಬೇಕು. ಕಾರ್ಯಕ್ರಮಗಳು ರಾಜಕೀಯ ರಹಿತವಾಗಿ ನಡೆದರೆ ಯಶಸ್ವಿ ಆಗುತ್ತದೆ. ಕಲೆ ಯಾರ ಅಸ್ತಿಯೂ ಅಲ್ಲ, ಅವರಲ್ಲಿನ ಪ್ರತಿಭೆ ಗುರುತಿಸುವ ಕೆಲಸವನ್ನು ಜನಸಮುದಾಯ ಹಾಗೂ ಇಲಾಖೆ ನಡೆಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ಹಿಂದಿನ ಸಿನಿಮಾಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದವು. ನಾಗೇಶ್ವರರಾವ್, ಎನ್‌ಟಿಆರ್, ರಾಜ್‌ಕುಮಾರ್, ವಿಷ್ಣುವರ್ಧನ್ ಸಿನಿಮಾಗಳು ತೆರೆ ಕಂಡರೆ ಜನ ಕಿಕ್ಕಿರಿದು ಸೇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತೆರೆ ಕಾಣುತ್ತಿರುವ ಸಿನಿಮಾಗಳು ಯುವಕರ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪ್ರಭಾರ ಬೀರುವಂತಿದೆ, ಯಾವ ಸಂದೇಶವನ್ನೂ ಸಿನಿಮಾಗಳು ನೀಡುತ್ತಿಲ್ಲ. ಕನಿಷ್ಠ ಪಕ್ಷ ಗ್ರಾಮೀಣ ಭಾಗದಲ್ಲಿ ಇಂತಹ ಜನಪದ ಉತ್ಸವಗಳಲ್ಲಾದರೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮನರಂಜನೆ ಪಡೆಯುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕೆಂದರು.
ಜಿಪಂ ಸದಸ್ಯ ಅರುಣ್ ಪ್ರಸಾದ್, ತಾಪಂ ಸದಸ್ಯ ಪಾಲಾಕ್ಷಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಪಿಡಿಒ ಆರ್.ಮಂಜುನಾಥ್ ಪ್ರಸಾದ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಕೀಲುಕುದುರೆ, ಡೊಳ್ಳುಕುಣಿತ, ವಾದ್ಯ ಗೋಷ್ಠಿ ಹಾಗೂ ಹಾಡುಗಾರಿಕೆ ನಡೆಯಿತು.