

ಬಂಗಾರಪೇಟೆ: ಜಾತಿನಿಂದನೆ, ಕೊಲೆ ಬೆದರಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ವಜಾಗೊಳಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಾತನಾಡಿ, ಶಾಸಕ ಮುನಿರತ್ನ ಬಿಬಿಎಂಪಿ ಹಾಗೂ ಇತರ ಕಡೆಗಳಲ್ಲಿ ಅಕ್ರಮ ಎಸಗಿ ಸಾವಿರಾರು ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ದಲಿತರಿಂದ ಮತ ಪಡೆದು ಶಾಸಕನಾಗಿ ಬಿಬಿಎಂಪಿ ಗುತ್ತಿಗೆದಾರನಿಂದ ಪ್ರತಿ ತಿಂಗಳು 30 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಡುವ ಅವರು ದಲಿತರನ್ನು ಅವಾಚ್ಯವಾಗಿ ನಿಂದಿಸಿರುವುದು ಸರಿಯಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತೇವೆ ಎಂದ ಅವರು, ಅಧಿಕಾರಕ್ಕಾಗಿ ಚುನಾವಣೆ ವೇಳೆ ದಲಿತ ಸಮುದಾಯದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಈಗೇಕೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುನಿರತ್ನ ಪರಾರಿಯಾಗಲು ಇಲ್ಲಿನ ಕೆಲ ನಾಯಕರು ಎಸ್ಕಾರ್ಟ್ ಕೊಟ್ಟಿದ್ದರು ಎಂದ ಅವರು, ಮುನಿರತ್ನ ಅವರು ಸಿನಿಮಾ ಅವಕಾಶ ನೀಡುವುದಾಗಿ ಹೇಳಿ ಅನೇಕ ಹೆಣ್ಣು ಮಕ್ಕಳ ಮಾನ ಹಾನಿ ಮಾಡಿದ್ದಾರೆ. 2019 ರಿಂದ 2023ರವರೆಗೆ ಕೆಎಲ್ಇಡಿಯಲ್ಲಿ ಸುಮಾರು 250 ಕೋಟಿ ರೂ. ಹಗರಣ ಮಾಡಿದ್ದು, ಸೂಕ್ತ ತನಿಖೆ ನಡೆಯಬೇಕಿದೆ. ಅಲ್ಲದೆ ಅವರ ಮೇಲಿರುವ ವೋಟರ್ ಐಡಿ ಕಾರ್ಡ್ ಪ್ರಕರಣವನ್ನು ಮತ್ತೊಮ್ಮೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದರು.
ಜಾತಿ ದುರ್ಬಳಕೆ ಆರೋಪ: ಒಕ್ಕಲಿಗ ಸಮುದಾಯದ ಗುತ್ತಿಗೆದಾರ ಮತ್ತು ದಲಿತ ಸಮುದಾಯವನ್ನು ನಿಂದಿಸಿದ ಬಗ್ಗೆ ಅವರದೇ ಪಕ್ಷದ ಎಸ್ಸಿ ವಿಭಾಗದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಏಕೆ ಪ್ರಶ್ನೆ ಮಾಡುತ್ತಿಲ್ಲ?, ನಾರಾಯಣಸ್ವಾಮಿಗೆ ರಾಜ್ಯದ ದಲಿತರ ಪರವಾಗಿ ಕಾಳಜಿ ಇದ್ದಿದ್ದರೆ, ಕೂಡಲೇ ರಾಜೀನಾಮೆಗೆ ಒತ್ತಾಯ ಮಾಡಬೇಕಿತ್ತು. ಆದರೆ ಮೀಸಲಾತಿ ಪಡೆದ ಅವರು ರಾಜಕೀಯಕ್ಕೆ ಮಾತ್ರ ಸಮುದಾಯ ಬಳಸಿಕೊಂಡು ಮೌನವಾಗಿದ್ದಾರೆ ಎಂದು ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು.
ಶಾಸಕ ಮುನಿರತ್ನ ಸ್ಥಾನದೊಂದಿಗೆ ವಜಾಗೊಳಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಗಾರಪೇಟೆಯ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಶಾಸಕ ಎಸ್.ಎನ್ ನಾರಾಯಣಸ್ವಾಮಿ,ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಳ್ಳಿ ಗೋವಿಂದರಾಜಲು, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ, ಪುರಸಭೆ ಅಧ್ಯಕ್ಷ ಗೋವಿಂದ, ಜಿಪಂ ಮಾಜಿ ಸದಸ್ಯ ಕೃಷ್ಣ, ಮುಖಂಡರಾದ ಪಾರ್ಥಸಾರತಿ, ಸುರೇಶ್, ಚಂದ್ರ, ಸುಹೇಲ್, ಬಾಬು ಇದ್ದರು.