ಶಾಸಕ ಸ್ಥಾನಕ್ಕೆ ಮುನಿರತ್ನ ರಾಜೀನಾಮೆ ನೀಡಲಿ: ಪುಷ್ಪಾ ಅಮರ್‌ನಾಥ್

Published on

ಮೈಸೂರು: ತಮ್ಮ ಸ್ಥಾನದ ಘನತೆ ಇಲ್ಲದಂತೆ ನಡೆದುಕೊಂಡಿರುವ ಬಿಜೆಪಿ ಶಾಸಕ ಮುನಿರತ್ನ ಅವರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಒತ್ತಾಯಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದು, ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ರಾಜ್ಯಪಾಲರು ಮುನಿರತ್ನ ಅವರ ರಾಜೀನಾಮೆ ಪಡೆಯಬೇಕು ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಿಜೆಪಿಯವರು ಹೆಣ್ಣನ್ನು ಗೌರವಯುತವಾಗಿ ಕಾಣುತ್ತೇವೆ ಎಂದು ಭಾಷಣ ಮಾಡುತ್ತಾರೆಯೇ ವಿನಾ, ಬದುಕಲು ಅವಕಾಶ ಮಾಡಿಕೊಡುತ್ತಿಲ್ಲ. ಚುನಾವಣೆ ವೇಳೆ ಎಲ್ಲ ಜಾತಿಗಳವರ ಮತ ಬೇಕು ಎನ್ನುವ ಅವರು ಬಳಿಕ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯದ ಗಲಭೆ ಕುರಿತು ಮಾತನಾಡುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗ ಏಕೆ ಸುಮ್ಮನಿದ್ದಾರೆ. ಮುನಿರತ್ನ ಅವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು. ಬಿಜೆಪಿಯವರಿಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮೋದಾಮಣಿ, ರಾಧಾಮಣಿ, ಸುಶೀಲಾ ಮರಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net