ಮುನಿರಾಬಾದ್‌ನಲ್ಲಿ ಜನತಾ ಜಲಧಾರೆಗೆ ಚಾಲನೆ: ಶಕ್ತಿ ಪ್ರದರ್ಶಿಸಿದ ಜೆಡಿಎಸ್ ಹಾಲಿ-ಮಾಜಿ ಶಾಸಕರು

160422 Munirabad JDS Jaladhaare
ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎನ್.ಎಂ.ನಬೀಸಾಬ್ ಚಾಲನೆ ನೀಡಿದರು. ಶಾಸಕ ವೆಂಕಟರಾವ ನಾಡಗೌಡ, ನಾಲ್ಕು ಜಿಲ್ಲೆಯ ಮುಖಂಡರು ಇದ್ದರು.
Published on

ಕೊಪ್ಪಳ: ನಾಡಿನ 15 ಜೀವನದಿಗಳಿಂದ ಜಲಸಂಗ್ರಹಿಸುವ ಮೂಲಕ ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಶನಿವಾರ ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯಲ್ಲಿ ಚಾಲನೆ ನೀಡಲಾಯಿತು.

ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಮೂಲಕ ಸಾಗುವ ಯಾತ್ರೆ ಬೆಂಗಳೂರು ತಲುಪಲಿದೆ. ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ ನಾಡಗೌಡ ನೇತೃತ್ವದಲ್ಲಿ ಯಾತ್ರೆ ಸಾಗಿದ್ದು, ನಾಲ್ಕೂ ಜಿಲ್ಲೆಗಳ ಜೆಡಿಎಸ್ ಮುಖಂಡರು, ಹಾಲಿ-ಮಾಜಿ ಶಾಸಕರು ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದರು. ಮಾಜಿ ಸಚಿವ ಎನ್.ಎಂ.ನಬೀಸಾಬ್, ದೇಶದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ ಆಡಳಿತ ನಡೆಸುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನಿಂದ ಪ್ರಗತಿ ಸಾಧ್ಯವಿಲ್ಲ. ರಾಜ್ಯದಲ್ಲಿ ಸದ್ಯ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಜೆಡಿಎಸ್ ಜನಪರ, ರೈತಪರ ಆಡಳಿತ ನಡೆಸಿದೆ.

ನಾವು ಕೈಗೊಂಡ ಅನೇಕ ಜನಪರ ಯೋಜನೆಗಳನ್ನು ಇವರು ಕಾಪಿ ಮಾಡುತ್ತಿದ್ದಾರೆಂದು ಕಿಡಿಕಾರಿದರು. ಮುನಿರಾಬಾದ್‌ನಿಂದ ಗವಿಮಠಕ್ಕೆ ಆಗಮಿಸಿದ ಗಂಗಾಜಲಕ್ಕೆ ಪೂಜೆ ಸಲ್ಲಿಸಿ, ಕನಕಗಿರಿಗೆ ಕಳಿಸಲಾಯಿತು. ಅಲ್ಲಿಂದ ಕಾರಟಗಿ, ಸಿಂಧನೂರು ಮಾರ್ಗವಾಗಿ ರಾಯಚೂರು ಪ್ರವೇಶಿಸಿ, ಮರಳಿ ಸಿರಗುಪ್ಪ ಮೂಲಕ ಉಳಿದ ಜಿಲ್ಲೆಗಳಲ್ಲಿ ಯಾತ್ರೆ ಸಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net