

ಮುನಿರಾಬಾದ್: ಕೊಪ್ಪಳ ತಾಲೂಕಿನ ಸುಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನ ಹುಂಡಿ ಹಣ ಗುರುವಾರ ಎಣಿಕೆ ಮಾಡಲಾಗಿದ್ದು, 43 ದಿನಗಳಲ್ಲಿ ಒಟ್ಟು 95.02 ಲಕ್ಷ ರೂ. ನಗದು ಸಂಗ್ರಹವಾಗಿದ್ದು, ಕಾಣಿಕೆ ರೂಪದಲ್ಲಿ 160 ಗ್ರಾಂ ಬಂಗಾರ ಮತ್ತು 7 ಕೆಜಿ ಬೆಳ್ಳಿ ಆಭರಣಗಳು ಸಲ್ಲಿಕೆಯಾಗಿವೆ.
ಈ ಹಿಂದೆ ಅಂದರೆ ಸೆ.3ರಂದು ಹುಂಡಿ ತೆರೆದು ಎಣಿಕೆ ಮಾಡಿದಾಗ 40 ದಿನದಲ್ಲಿ 1.17 ಕೋಟಿ ರೂ. ನಗದು, 130 ಗ್ರಾಂ ಬಂಗಾರ ಮತ್ತು 10 ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿತ್ತು.
ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹಣ ಎಣಿಕೆ ಮಾಡಲಾಯಿತು. ಕರ್ನಾಟಕ ಬ್ಯಾಂಕ್, ದೇವಸ್ಥಾನ ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಹುಲಿಗಿ ಗ್ರಾಮದ ಗುರು ಹಿರಿಯರು ಹುಂಡಿ ಎಣಿಕೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶ್ ರಾವ್, ಉಪಕಾರ್ಯದರ್ಶಿ ಬಸವರಾಜ ಹಾಗೂ ಪ್ರಾಧಿಕಾರದ ಸದ್ಯಸರು ಉಪಸ್ಥಿತರಿದ್ದರು.