ಬೀದಿಗೆ ಬಂದ ವ್ಯಾಪಾರಿಗಳ ಬದುಕು

Huligi temple road clearence
ಹುಲಿಗಿಯಲ್ಲಿ ಒತ್ತುವರಿ ನಂತರ ಅಂಗಡಿಗಳನ್ನು ಮುಚ್ಚಿರುವುದು.
Published on

ಕನಕರಾಯ ನಾಯಕ

ಮುನಿರಾಬಾದ್: ಹುಲಿಗೆಮ್ಮ ದೇವಿ ದೇವಸ್ಥಾನದ ರಸ್ತೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಜಿಲ್ಲಾಡಳಿತವು ಅನಧಿಕೃತ ಅಂಗಡಿಗಳ ತೆರವು ಮಾಡಿದ ನಂತರ ಬೀದಿಬದಿ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.

ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುರಕ್ಷಿತ ಮತ್ತು ಸಮರ್ಪಕ ವ್ಯವಸ್ಥೆಗಳನ್ನು ಕಲ್ಪಿಸುವ ದೃಷ್ಟಿಯಿಂದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಗಳು, ದೇವಸ್ಥಾನದ ರಸ್ತೆ ಹಾಗೂ ಹಿಂಭಾಗದ ತುಂಗಭದ್ರಾ ನದಿ ದಡದಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಮಾಡಲಾಗಿತ್ತು. ಇದರಿಂದ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ವ್ಯಾಪಾರಸ್ಥರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ವ್ಯಾಪಾರಸ್ಥರು ಮುಂದಿನ ಜೀವನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದಿಂದ ಮುಂದಿನ ದಿನಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸೃ್ಗಳನ್ನು ನಿರ್ಮಾಣ ಮಾಡಿ, ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟರೆ ತುಂಬಾ ನೆರವಾಗಲಿದೆ ಎಂಬುದು ವ್ಯಾಪಾರಸ್ಥರ ಆಶಾಭಾವನೆ.

ಪ್ರಾಧಿಕಾರದ ವ್ಯಾಪ್ತಿಯಲ್ಲಿ 34 ವಾಣಿಜ್ಯ ಮಳಿಗೆಗಳು ಇವೆ. ಇವುಗಳನ್ನು ಟೆಂಡರ್ ಮೂಲಕ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ ಭಕ್ತಾದಿಗಳು ಸಂಚರಿಸುವ ಪುಟ್‌ಪಾತ್ ಒತ್ತುವರಿ ಮಾಡಿ ವ್ಯಾಪಾರ ಮಾಡುವುದು ಸರಿಯಲ್ಲ ಎಂದು ಹೇಳಿರುವ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶರಾವ್, ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಜಿಲ್ಲಾಡಳಿತದ ಆದೇಶದಂತೆ ಒತ್ತುವರಿ ಮಾಡಿದ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದಿದ್ದಾರೆ.

ಜಿಲ್ಲಾಡಳಿತದ ನಿರ್ಧಾರ ಶ್ಲಾಘನೀಯವಾದರೂ ತೆರವುಗೊಳಿಸಲು ಗುರುತು ಮಾಡಿದ್ದಕ್ಕಿಂತ ಹೆಚ್ಚಿನ ಸ್ಥಳ ತೆರವು ಮಾಡಲಾಗಿದೆ. ದೇವಸ್ಥಾನ ಮುಂಭಾಗದಲ್ಲಿನ ವಾಣಿಜ್ಯ ಕಟ್ಟಡಗಳನ್ನು ಕಳೆದ 10 ವರ್ಷದಿಂದ ಬಾಡಿಗೆ ಮೂಲಕ ಟೆಂಡರ್ ಪಡೆಯುತ್ತ ಬರಲಾಗಿದೆ. ಈ ವರ್ಷದ ಟೆಂಡರ್ ಪ್ರಕ್ರಿಯೆ ಪಡೆದು ಒಂದು ತಿಂಗಳಾಗಿದೆ. ಟೆಂಡರ್‌ಗಳನ್ನು ಪಡೆಯಲು ಲಕ್ಷಗಟ್ಟಲೆ ಸಾಲ ಮಾಡಿದ್ದೇವೆ. ಏಕಾಏಕಿ ನಿರ್ಧಾರದಿಂದ ವ್ಯಾಪಾರ ಮಾಡಲು ಬಹಳ ಕಷ್ಟಕರವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥೆ ಮಂಜುಳಾ ವೆಂಕಟೇಶಪ್ಪ.

ಇಡೀ ಜೀವನ ಅಂಗಡಿ ವ್ಯಾಪಾರದ ಮೇಲೆ ನಿಂತಿದೆ, ದಿನವೂ ದುಡಿಮೆ ಇರುವುದಿಲ್ಲ, ವಿಶೇಷ ವಾರಗಳಲ್ಲಿ ಮತ್ತು ಹುಣ್ಣಿಮೆಗಳಲ್ಲಿ ಮಾತ್ರ ವ್ಯಾಪಾರ. ಈಗ ಅದಕ್ಕೂ ಅವಕಾಶ ಇಲ್ಲವಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥ ತಿರುಪತಿ ಈಡಿಗೇರ್.

ಈಗ ವ್ಯಾಪಾರ ಮಾಡಲು ಅವಕಾಶ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಸ್ಥಳಾವಕಾಶ ಕಲ್ಪಿಸಬೇಕು. ವ್ಯಾಪಾರ ಮಾಡಲು ಸ್ಥಳ ನೀಡಿದರೆ ಎಲ್ಲ ಅಂಗಡಿ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. | ತಿರುಪತಿ ಈಡಿಗೇರ್ ಹೊಳೆದಂಡೆಯ ವ್ಯಾಪಾರಸ್ಥ

ಏಕಾಏಕಿ ತೆರವು ನಿರ್ಧಾರದಿಂದ ವ್ಯಾಪಾರ ಮಾಡಲು ಬಹಳ ಕಷ್ಟಕರವಾಗಿದೆ. ಜೀವನ ಅತಂತ್ರವಾಗಿದೆ. ಮುಂದಿನ ದಿನಗಳಲ್ಲಿ ನಮಗೆ ಪ್ರಾಧಿಕಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. | ಮಂಜುಳಾ ವೆಂಕಟೇಶಪ್ಪ ವ್ಯಾಪಾರಸ್ಥೆ

ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡಿ ವ್ಯಾಪಾರಸ್ಥರಿಗೆ ವ್ಯಾಪಾರ- ವಹಿವಾಟು ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. | ಎಂ.ಎಚ್. ಪ್ರಕಾಶರಾವ್ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net