ಗುಂಡಿಗಳಿಂದ ಸಂಚಾರಕ್ಕೆ ಸಂಚಕಾರ > ಪ್ರಯಾಣಿಕರ ನಿತ್ಯ ಪರದಾಟ

mnd-1
ಮುನಿರಾಬಾದ್ ಸಮೀಪದ ಹುಲಿಗಿ ಗ್ರಾಮದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಮಧ್ಯೆಯೇ ವಾಹನಗಳು ಸಂಚರಿಸುತ್ತಿರುವುದು.
Published on

ಮುನಿರಾಬಾದ್: ಸಮೀಪದ ಹಿಟ್ನಾಳ ಹೋಬಳಿ ವ್ಯಾಪ್ತಿಯ ಪ್ರಮುಖ ಹಾಗೂ ಒಳ ರಸ್ತೆಗಳು ಹಲವು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ ಬಂದಿದೆ.

ಹೋಬಳಿಯ ಪ್ರಮುಖ ಸಂಪರ್ಕ ಕೊಂಡಿಯಾದ ಹಿಟ್ನಾಳದಿಂದ ಹುಲಿಗಿಗೆ ಹೋಗುವ ರಸ್ತೆ ಮತ್ತು ಹುಲಿಗಿಯಿಂದ ಹೊಳೆ ಮುದ್ಲಾಪುರ, ಹೊಸಪೇಟೆಗೆ ತೆರಳುವ ರಸ್ತೆ ಸೇರಿ ಹೋಬಳಿ ವ್ಯಾಪ್ತಿಯಲ್ಲಿನ ಒಳಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ಈ ರಸ್ತೆಗಳಲ್ಲಿ ಡಾಂಬರು ಕಿತ್ತುಹೋಗಿದ್ದು, ದೊಡ್ಡ ಗುಂಡಿಗಳು ಬಿದ್ದಿವೆ. ಜಲ್ಲಿ ಕಲ್ಲುಗಳು ಮೇಲಿದ್ದಿವೆ. ಇದರಿಂದ ಈ ರಸ್ತೆಗಳಲ್ಲಿ ಸಂಚರಿಸಲು ಪ್ರಯಾಣಿಕರು ನಿತ್ಯವೂ ಹರಸಾಹಸ ಪಡುವಂತಾಗಿದೆ. ಅಲ್ಲದೆ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಇದೇ ರಸ್ತೆಯಲ್ಲಿ ಬರಬೇಕಿದ್ದು, ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಅಪಘಾತಕ್ಕೆ ಆಹ್ವಾನಿಸುವ ಗುಂಡಿಗಳು: ಹುಲಿಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸುತ್ತಿರುವ ಕಾರಣ ಹಿಟ್ನಾಳ ಹೋಬಳಿ ವ್ಯಾಪ್ತಿಯ ಜನ ಹುಲಿಗಿ, ಹೊಳೆ ಮುದ್ಲಾಪುರ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.

ಇಲ್ಲಿಂದ ಹೊಸಪೇಟೆಗೂ ಹೋಗಬಹುದು. ಹೆಚ್ಚು ವಾಹನ ಸಂಚಾರದಿಂದ ರಸ್ತೆ ಮತ್ತಷ್ಟು ಹದಗೆಟ್ಟು ಗುಂಡಿಗಳು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನಿಸುತ್ತಿವೆ. ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಉದಾಹರಣೆಗಳಿವೆ. ಈ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಬೇಸತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷೃ: ಈ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣು ಹಾಕಿ ಮುಚ್ಚುವ ಪ್ರಯತ್ನ ಮಾಡಲಾಗಿತ್ತು. ಆದರೆ, ನಮಗೆ ತಾತ್ಕಾಲಿಕ ಪ್ಯಾಚ್ ವರ್ಕ್ ಬೇಕಿಲ್ಲ, ಸಮಗ್ರ ಮತ್ತು ಗುಣಮಟ್ಟದ ರಸ್ತೆ ನಿಮಾರ್ಣವಾಗಬೇಕು. ತಾತ್ಕಾಲಿಕ ಕಾಮಗಾರಿ ಕೈಗೊಳ್ಳುವುದು ಬೇಕಿಲ್ಲವೆಂದು ಅಧಿಕಾರಿಗಳ ಧೋರಣೆಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

======

ರಸ್ತೆಗಳ ದುಸ್ಥಿತಿಯ ಬಗ್ಗೆ ಹೋಬಳಿಯ ಜನರು ಅನೇಕ ಬಾರಿ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ, ಯಾವುದೇ ಬದಲಾವಣೆ ಆಗಿಲ್ಲ. ಪ್ರತಿ ಚುನಾವಣೆಯಲ್ಲೂ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡುವ ಜನಪ್ರತಿನಿಧಿಗಳು ಚುನಾವಣೆ ಮುಗಿದ ಮರೆತು ಹೋಗುತ್ತಾರೆ.

> ಕಾರ್ತಿಕ ನಾಯಕ, ಹೊಳೆಮುದ್ಲಾಪುರ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net