

ನರಗುಂದ: ಕಳೆದೆರಡು ದಿನಗಳಿಂದ ತಾಲೂಕಿನಾದ್ಯಂತ ಸುರಿದಿದ್ದ ಮಳೆ ಶನಿವಾರದಿಂದ ಕೊಂಚ ಬಿಡುವು ನೀಡಿದೆ. ಮಲಪ್ರಭಾ, ಬೆಣ್ಣೆಹಳ್ಳದ ನೆರೆಯಿಂದ ನೂರಾರು ರೈತರ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾಗಿದ್ದು, ಹಬ್ಬದ ಸಂಭ್ರಮಕ್ಕೆ ಮಂಕು ಕವಿದಿದೆ.
ಬೆಳಗಾವಿ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ನವಿಲುತೀರ್ಥ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2079.50 ಅಡಿ ಸಾಮರ್ಥ್ಯ ಡ್ಯಾಂನಲ್ಲಿ ಈಗಾಗಲೇ 2079.30 ಅಡಿ ನೀರು ಸಂಗ್ರಹಗೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕೊಣ್ಣೂರಿನ ಮಲಪ್ರಭಾ ನದಿಗೆ 8 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಪರಿಣಾಮ ತಾಲೂಕಿನ ಕೊಣ್ಣೂರಿನ ಹಳೇ ಸೇತುವೆ, ಸಣ್ಣ ಕೋಡಿಹಳ್ಳದ ಸೇತುವೆ ಮೂಲಕ ಗೋವನಕೊಪ್ಪ, ಕಿತ್ತಲಿ, ಬಾದಾಮಿ, ಮುಂತಾದೆಡೆ ತೆರಳುವ ಮಾರ್ಗಗಳು ಬಂದ್ ಆಗಿವೆ. ಪರ್ಯಾಯವಾಗಿ ಹೊಸ ಸೇತುವೆ ಮುಖಾಂತರ ಎಲ್ಲ ವಾಹನಗಳ ಸಂಚಾರ ನಡೆಸಲಾಗುತ್ತಿದೆ.
ನವಿಲುತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿದರೆ ಲಖಮಾಪೂರ, ಕೊಣ್ಣೂರ, ವಾಸನ, ಬೆಳ್ಳೇರಿ, ಹಳೇ ಬೂದಿಹಾಳ, ಶಿರೋಳ ಗ್ರಾಮಸ್ಥರಿಗೆ ಪ್ರವಾಹದ ಭೀತಿ ತಪ್ಪಿದ್ದಲ್ಲ. ಬೆಣ್ಣೆಹಳ್ಳದ ಪ್ರವಾಹದಿಂದ ಹಳೇ ಸುರಕೋಡ ಗ್ರಾಮದ 400ಕ್ಕೂ ಅಧಿಕ ಕುಟುಂಬಗಳು ಸಂಪೂರ್ಣ ನಡುಗಡ್ಡೆಯಂತಾಗಿದ್ದವು. ಭಾನುವಾರ ಬೆಳಗ್ಗೆ ಪ್ರವಾಹ ಕಡಿಮೆಯಾಗಿದ್ದರಿಂದ ಸುರಕೋಡ, ಕುರ್ಲಗೇರಿ ಬೆಣ್ಣೆಹಳ್ಳ ಸೇತುವೆ ಸಂಚಾರ ಪುನರಾರಂಭಗೊಂಡಿದೆ. ಗಂಗಾಪೂರದಿಂದ-ರಡ್ಡೇರನಾಗನೂರ ರಸ್ತೆ, ಗಂಗಾಪೂರದ ತೋಳನ ಹಳ್ಳದ ಸೇತುವೆ ಸಂಪರ್ಕಗಳು ಕಡಿತಗೊಂಡಿವೆ.
ಬೆಣ್ಣೆಹಳ್ಳದ ಪ್ರವಾಹಕ್ಕೆ ಹದ್ಲಿ, ಸುರಕೋಡ, ಕುರ್ಲಗೇರಿ, ಬನಹಟ್ಟಿ, ಮೂಗನೂರ ಗ್ರಾಮದ ಗೋವಿನಜೋಳ, ಹತ್ತಿ, ತೊಗರಿ, ಉಳ್ಳಾಗಡ್ಡಿ ಮುಂತಾದ ಬೆಳೆಗಳು ಜಲಾವೃತಗೊಂಡು ಹಾನಿಗೀಡಾಗಿವೆ. ಮಲಪ್ರಭಾ ಪ್ರವಾಹದಿಂದ ಕೊಣ್ಣೂರಿನ ಹಿಂದು ರುದ್ರಭೂಮಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.
ಗ್ರಾಮದ ಹೊರವಲಯದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ವಾಸನದ ಶ್ರೀ ತುಳಸಿಗೇರಿ ಆಂಜನೇಯ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿ ಪೂಜೆಗಾಗಿ ಭಕ್ತರು ಪರದಾಡುವಂತಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿಗೀಡಾಗಿರುವ ರೈತರ ವಿವಿಧ ಬೆಳೆಗಳಿಗೆ ಸರ್ಕಾರದಿಂದ ಇದುವರೆಗೂ ನಯಾಪೈಸೆ ಪರಿಹಾರ ವಿತರಿಸಿಲ್ಲ.
ಮಳೆ ನಿಂತರೂ ಕೈಬಿಡುತ್ತಿಲ್ಲ ಜಲ:
ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆ, ಚರಂಡಿಗಳು ತುಂಬಿ ಹರಿದ ಪರಿಣಾಮ ಕೆಲವೊಂದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದೆ. ಈ ನಡುವೆ ಮಳೆ ನಿಂತರೂ ಜನರಿಗೆ ಜಲಕಂಟಕ ಬಿಡುತ್ತಿಲ್ಲ. ಈ ಹಿಂದೆ ಸ್ವಲ್ಪ ಮಳೆ ಸುರಿದರೆ ನಗರದ ಎಲ್ಲೆಂದರಲ್ಲಿ ಭೂಕುಸಿತ ಪ್ರಕರಣಗಳು ಕಂಡು ಬರುತ್ತಿದ್ದವು. ಬೃಹದಾಕಾರದ ಗುಂಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಆದರೀಗ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಸರಸ್ವತಿನಗರ ಬಡಾವಣೆಯ ಹುಚ್ಚೇಸಾಬ ಹವಾಲ್ದಾರ ಎಂಬುವರ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಬಿದ್ದ ಗೋಡೆ ನಿರ್ವಿುಸಿಕೊಳ್ಳಲು ಕೇವಲ 1 ಅಡಿ ಗುಂಡಿ ಅಗೆದರೆ ಅಪಾರ ಪ್ರಮಾಣದ ನೀರು ಉಕ್ಕಿ ಹರಿಯುತ್ತಿದೆ. ಅಲ್ಲದೆ, ಪಟ್ಟಣದ ಅರ್ಭಾಣ, ಕಸಬಾ, ಹಗೇದಕಟ್ಟಿ, ಸುಣದಗಸಿ ಓಣಿ, ಸವದತ್ತಿ ರಸ್ತೆಯ ಕೆಲವೊಂದು ನೆಲಮಹಡಿ ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ. ನೆಲಮಹಡಿಯಲ್ಲಿ ಸಂಗ್ರಹಗೊಂಡ ನೀರನ್ನು ಪಂಪಸೆಟ್ ಮೂಲಕ ನಿರಂತರ ಹೊರಹಾಕುವ ಕೆಲಸ ಮಾಡಲಾಗುತ್ತಿದ್ದು, ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕಿದೆ.