

ಮಾನ್ವಿ: ಪುರಸಭೆ ಮಳಿಗೆಗಳಿಗೆ ಸಂಬಂಧಿಸಿದಂತೆ ಹರಾಜಿನ ನಿಯಮದಂತೆ ಕ್ರಮಕೈಗೊಳ್ಳಬೇಕು. ಪುರಸಭೆಗೆ ಮುಂಗಡ ಹಣ ಪಾವತಿಸದಿರುವವರಿಗೆ ದಂಡದೊಂದಿಗೆ ಪಾವತಿಸಲು ಅವಕಾಶ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಗಂಗಾಧರಗೆ ಸಹಾಯಕ ಆಯುಕ್ತೆ ಮೆಹಬೂಬಿ ಸೂಚಿಸಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಪುರಸಭೆ ಮಳಿಗೆಗಳಲ್ಲಿನ ಬಾಡಿಗೆದಾರರ ತೆರವು ಕಾರ್ಯಾಚಾರಣೆ ಗುರುವಾರ ನಡೆಸಲಾಯಿತು. ಬಾಡಿಗೆದಾರರ ವಸ್ತುಗಳನ್ನು ತೆರವುಗೊಳಿಸಿ ಮಳಿಗೆಗಳನ್ನು ಪುರಸಭೆ ವಶಕ್ಕೆ ಪಡೆಯಲಾಯಿತು. ಈ ಹಿಂದೆ ಮಳಿಗೆಗಳಿಗೆ ಬೀಗ ಮುದ್ರೆ ಹಾಕಿದ್ದರೂ, ಬಾಡಿಗೆದಾರರು ಮಳಿಗೆಗಳ ಮುಂದೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುವ ಮೂಲಕ ಮಳಿಗೆಗಳನ್ನು ಬಿಟ್ಟುಕೊಡದಿರುವುದು ಸರಿಯಲ್ಲ. ಹರಾಜಿನಲ್ಲಿ ಮಳಿಗೆಗಳನ್ನು ಪಡೆದು ಲಕ್ಷಾಂತರ ರೂ. ಮುಂಗಡ ಹಣವನ್ನು ಪುರಸಭೆಗೆ ಪಾವತಿ ಮಾಡಿದರೂ ಮಳಿಗೆಗಳು ದೊರೆಯದಿರುವುದರಿಂದ ಪುರಸಭೆಗೆ ಆರ್ಥಿಕ ನಷ್ಟವಾಗುತ್ತಿದೆ ಎಂದರು.
40 ಮಳಿಗೆಗಳನ್ನು ಜಿಲ್ಲಾಧಿಕಾರಿ ಅದೇಶದಂತೆ ಹರಾಜು ಹಾಕಲಾಗಿದೆ. ಹಳೇ ಬಾಡಿಗೆದಾರರು ವಸ್ತುಗಳನ್ನು ತೆಗೆದುಕೊಂಡು ಹೋಗದಿರುವುದರಿಂದ ಮಳಿಗೆಗಳಲ್ಲಿನ ವಸ್ತುಗಳನ್ನು ಹೊರ ಹಾಕಿ ಖಾಲಿ ಮಳಿಗೆಗಳನ್ನು ಪುರಸಭೆ ವಶಕ್ಕೆ ಪಡೆದುಕೊಳ್ಳಲಾಯಿತು. ತಹಸೀಲ್ದಾರ್ ರಾಜು ಫಿರಂಗಿ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಹಿರಿಯ ಆರೋಗ್ಯಧಿಕಾರಿ ಮಹೇಶ್, ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.