

ಗುಂಡ್ಲುಪೇಟೆ: ಪುರಸಭೆ ವತಿಯಿಂದ ಇತ್ತೀಚೆಗೆ ಸ್ವಚ್ಛತಾ ಇ-ಸೇವಾ ಜಾಗೃತಿ ಜಾಥಾ ನಡೆಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಶರವಣ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್, ನಗರಾಭಿವೃದ್ಧಿ ಇಲಾಖೆ ಪೌರಾಡಿತ ನಿರ್ದೇಶನಾಲಯ ಹಾಗೂ ಪುರಸಭೆ ವತಿಯಿಂದ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ ದಿನವೂ ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿರಂತರವಾಗಿ ಕಸ ಸುರಿಯುವ ಸ್ಥಳವನ್ನು ಬದಲಾವಣೆ ಮಾಡುವ ಉದ್ದೇಶದಿಂದ ಕಸದಿಂದ ಕಲೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.
ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಕಾಲ್ನಡಿಗೆ ಹಾಗೂ ಸೈಕಲ್ ಜಾಥಾ ನಡೆಸಲಾಗುತ್ತಿದೆ. ಜತೆಗೆ ಶಾಲಾ ಮಕ್ಕಳಿಗೆ ಸ್ವಚ್ಛತೆ ಕುರಿತು ಕಲಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ. ಆದ್ದರಿಂದ ಪಟ್ಟಣ ವ್ಯಾಪ್ತಿಯ ನಿವಾಸಿಗಳು, ಹೋಟೆಲ್ ಅಂಗಡಿ ಮಾಲೀಕರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಸ್ವಚ್ಛ ಗುಂಡ್ಲುಪೇಟೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಮುಂಭಾಗದಿಂದ ಆರಂಭಗೊಂಡ ಜಾಥಾ ಹಳೇ ಬಸ್ ನಿಲ್ದಾಣ, ಕೆಆರ್‌ಸಿ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಪ್ಲಾಸ್ಟಿಕ್ ನಿಷೇಧ ಹಾಗೂ ಹಸಿ ಮತ್ತು ಒಣ ಕಸ ಬೇಪರ್ಡಿಸುವಂತೆ ಘೋಷಣೆ ಕೂಗಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ, ಪರಿಸರ ಇಂಜಿನಿಯರ್ ಮಹೇಶ್, ಕಂದಾಯಾಧಿಕಾರಿ ಸವಿತಾ, ಜೆಇ ಮಂಜುನಾಥ್, ಕಿರಣ್, ಕುಮಾರ್, ಸಿದ್ದರಾಜು, ಮೂರ್ತಿ ಇದ್ದರು.