

ಶಿವಮೊಗ್ಗ: ನಗರಪಾಲಿಕೆ ಅಧಿಕಾರಿಯೊಬ್ಬರು ಸ್ಯಾನಿಟರಿ ಸೂಪರ್ವೈಸರ್ ಕೆಲಸ ನೀಡುವುದಾಗಿ ಹೇಳಿ 40 ಸಾವಿರ ರೂ. ಪಡೆದು ಈಗ ಕೆಲಸ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿ ಹೊಸಮನೆ ನಿವಾಸಿ ಪಾಲಾಕ್ಷಿ ಬುಧವಾರ ಪಾಲಿಕೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ನಾನು ಸ್ಯಾನಿಟರಿ ಸೂಪರ್ವೈಸರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೆ. ಕೆಲಸ ಬೇಕಾದರೆ ಒಂದು ಲಕ್ಷ ರೂ. ನೀಡುವಂತೆ ಪಾಲಿಕೆ ಅಧಿಕಾರಿ ತಿಳಿಸಿದ್ದರು. ಈಗ ಆ ಜಾಗಕ್ಕೆ ಒಂದು ಲಕ್ಷ ರೂ. ನಡೆಯುತ್ತಿದೆ. ನಾನು ಹಲವರಿಗೆ ಇದರಲ್ಲಿ ಹಣ ಹಂಚಿಕೆ ಮಾಡಬೇಕು. ನನ್ನ ಬಡತನ ವಿವರಿಸಿದ ನಂತರ 50 ಸಾವಿರ ರೂ.ಗೆ ಕೆಲಸ ನೀಡುವುದಾಗಿ ಅಧಿಕಾರಿ ಭರವಸೆ ನೀಡಿದ್ದರು ಎಂದು ಪಾಲಾಕ್ಷಿ ತಿಳಿಸಿದರು.
ಸಾಲ ಮಾಡಿ 40 ಸಾವಿರ ರೂ. ಹೊಂದಿಸಿ ಅವರಿಗೆ ಕೊಟ್ಟಿದ್ದೆ. ಆದರೆ ಬುಧವಾರ ಕೆಲಸಕ್ಕೆ ಬಂದಾಗ, ನೀನು ಈ ಹಿಂದೆ ಚುನಾವಣೆಯೊಂದರಲ್ಲಿ ಸ್ಪರ್ಧಿಸಿರುವ ಕಾರಣ ನಿನಗೆ ಕೆಲಸ ನೀಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿದ್ದಾರೆ. ನನಗೆ ಕೆಲಸ ನೀಡಬೇಕು, ಇಲ್ಲವೇ ಲಂಚ ಪಡೆದ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಪಾಲಾಕ್ಷಿ ಆಗ್ರಹಿಸಿದರು.