

ಕುಮಟಾ: ಇಲ್ಲಿನ ಪುರಸಭೆ ಕಾರ್ಯಾಲಯವನ್ನು ಗಿಬ್ ವೃತ್ತ ಸನಿಹದ ಹಳೆಯ ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ನಡೆದಿರುವ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಂದ ಮಾಹಿತಿ ಪಡೆದು ಚುರುಕಾಗಿ ಕೆಲಸ ಮುಗಿಸುವಂತೆ ಸೂಚಿಸಿದ್ದಾರೆ.
ಪುರಸಭೆಯ ಕಾರ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿದ್ದ ಶಾಸಕ ದಿನಕರ ಶೆಟ್ಟಿ, ಹಳೆಯ ತಹಸೀಲ್ದಾರ ಕಚೇರಿಯನ್ನು ಪುರಸಭೆ ಕಾರ್ಯಾಲಯವಾಗಿ ಬಳಸಲು ಸಿದ್ಧತೆಗಳು ಎಲ್ಲಿಗೆ ಬಂದಿದೆ ಎಂದು ವಿಚಾರಿಸಿದರು. ಛಾವಣಿ ಕೆಲಸ ಬಾಕಿ ಇದೆ ಎಂದು ಕಿರಿಯ ಇಂಜಿನಿಯರ್ ಉಮೇಶ ಮಡಿವಾಳ ತಿಳಿಸಿದಾಗ, ಮಳೆ ಬಂದರೆ ಅಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಆದಷ್ಟು ಬೇಗ ಕೆಲಸ ಮುಗಿಸಬೇಕು ಎಂದು ಶಾಸಕ ಶೆಟ್ಟಿ ತಿಳಿಸಿದರು.
ಈ ವೇಳೆ ಕೆಲ ಸದಸ್ಯರು ಮಾತನಾಡಿ, ಗುತ್ತಿಗೆದಾರ ಟೆಂಡರ್ ದರಕ್ಕಿಂತ ಶೇ. 32ರಷ್ಟು ಕಡಿಮೆ ಮೊತ್ತಕ್ಕೆ ಗುತ್ತಿಗೆ ಪಡೆದಿರುವುದು ಗಮನಿಸಬೇಕಿದೆ. ಕಟ್ಟಡದ ದುರಸ್ತಿ ಕಾರ್ಯದ ಗುಣಮಟ್ಟದ ಬಗ್ಗೆ ಇಂಜಿನಿಯರ್ ನಿಗಾವಹಿಸಬೇಕು ಎಂದರು. ಮುಂದಿನ ವಾರ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರ ತಿಳಿಸಿದರು.
ಪಟ್ಟಣದ ಮೂರುಕಟ್ಟೆಯಲ್ಲಿ ಮಹಡಿ ಮೇಲಿರುವ ಪುರಸಭೆಯ ಕಾರ್ಯಾಲಯಕ್ಕೆ ಸಮರ್ಪಕ ವಾಹನ ನಿಲುಗಡೆ ಜಾಗವಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ, ಸಭಾನಾಯಕ, ಮುಖ್ಯಾಧಿಕಾರಿ ಸಹಿತ ಎಲ್ಲ ಅಧಿಕಾರಿ, ಸಿಬ್ಬಂದಿ ಕೆಲಸಕ್ಕೂ, ಸಾರ್ವಜನಿಕರು ಬಂದು ಹೋಗುವುದಕ್ಕೂ ತೀರಾ ಇಕ್ಕಟ್ಟಾಗಿದೆ. ಸದ್ಯದ ಕಟ್ಟಡವೂ ಹಳೆಯದಾಗಿದ್ದು ಅಸುರಕ್ಷಿತ ಎಂಬ ಸ್ಥಿತಿಗೆ ತಲುಪಿದೆ. ಹೀಗಾಗಿ ದಶಕಗಳಿಂದಲೂ ಸುವ್ಯವಸ್ಥಿತ, ಅಗತ್ಯಕ್ಕೆ ತಕ್ಕಷ್ಟು ದೊಡ್ಡದಾದ ಪುರಸಭೆ ಕಾರ್ಯಾಲಯದ ಕಟ್ಟಡಕ್ಕಾಗಿ ಬೇಡಿಕೆಯಿದ್ದರೂ ಈಡೇರಿರಲಿಲ್ಲ. ವರ್ಷದ ಹಿಂದೆ ಮೂರೂರು ರಸ್ತೆಯಲ್ಲಿ ತಾಲೂಕು ಸೌಧ ಸಿದ್ಧಗೊಂಡು ತಹಸೀಲ್ದಾರ್ ಕಚೇರಿಯ ಬಹುತೇಕ ವಿಭಾಗಗಳು ಅಲ್ಲಿಗೆ ಸ್ಥಳಾಂತರಗೊಂಡಿವೆ. ಹೀಗಾಗಿ ತಹಸೀಲ್ದಾರ ಕಚೇರಿಯ ಶತಮಾನದ ಹಳೆಯ ಕಟ್ಟಡವನ್ನೇ ಅನಿವಾರ್ಯವಾಗಿ ದುರಸ್ತಿಗೊಳಿಸಿ ಪುರಸಭೆ ಕಾರ್ಯಾಲಯವನ್ನು ಅಲ್ಲಿಗೆ ಸ್ಥಳಾಂತರಿಸುವತ್ತ ಶಾಸಕ ದಿನಕರ ಶೆಟ್ಟಿ ಮುತುವರ್ಜಿ ವಹಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ಪುರಸಭೆಯ ಕಾರ್ಯಚಟುವಟಿಕೆಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಆದರೆ, ತಹಸೀಲ್ದಾರ ಕಚೇರಿಯ ದುರಸ್ತಿ ಕಾರ್ಯ ಇದೇ ರೀತಿ ಆಮೆಗತಿಯಲ್ಲಿ ನಡೆದರೆ ಈ ಮಳೆಗಾಲದೊಳಗೆ ಪುರಸಭೆ ಕಾರ್ಯಾಲಯ ಸ್ಥಳಾಂತರ ಕಷ್ಟವಾಗಬಹುದು ಎಂಬ ಕಾರಣಕ್ಕೆ ಶಾಸಕ ಶೆಟ್ಟಿ ಅಧಿಕಾರಿಗಳಿಗೆ ಚುರುಕಾಗಿ ಕೆಲಸ ಮುಗಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.