

ಹಾಸನ: ನಗರಸಭೆ ಸದಸ್ಯನೊಬ್ಬನನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಇಂಥದ್ದೊಂದು ಬರ್ಬರ ಕೊಲೆ ಹಾಸನದಲ್ಲಿ ನಡೆದಿದೆ.
ಹಾಸನ ನಗರಸಭೆಯ 16ನೇ ವಾರ್ಡ್ ರಾಜ್ಕುಮಾರ್ ನಗರ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆಗೀಡಾದ ವ್ಯಕ್ತಿ. 15ನೇ ವಾರ್ಡ್ ಲಕ್ಷ್ಮೀಪುರ ಬಡಾವಣೆ 4ನೇ ಮುಖ್ಯರಸ್ತೆ ಬಳಿ ಈ ಕೊಲೆ ಮಾಡಲಾಗಿದೆ. ಈತ ಬೈಕ್ನಲ್ಲಿ ಹೋಗುವಾಗ ಆಟೋದಲ್ಲಿ ಎದುರಾಗಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.
ಪ್ರಕರಣ ನಡೆಯುತ್ತಿದ್ದಂತೆ ಸ್ಥಳಕ್ಕೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಆಸ್ಪತ್ರೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ ನೀಡಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.