

ಮಸ್ಕಿ: ಪಟ್ಟಣದ ಪುರಸಭೆಯಲ್ಲಿ ಹಲವು ವರ್ಷಗಳಿಂದ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿರುವ ಶರಣಪ್ಪ ಕಟ್ಟಿಮನಿ ಇವರ ಪುತ್ರ ಅಭಿಷೇಕ ಕಟ್ಟಿಮನಿ, ಈಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ 720 ರಾಂಕ್ ಪಡೆವ ಮೂಲಕ ಮೆಡಿಕಲ್ ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆಯಲ್ಲಿ ಓದಿರುವ ಅಭಿಷೇಕ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.88 ಅಂಕ ಪಡೆದಿದ್ದಾರೆ. ಗಂಗಾವತಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, ಶೇ.95.33ಅಂಕ ಪಡೆದಿದ್ದಾರೆ.
ಈಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ 720 ರಾಂಕ್ ಪಡೆಯುವ ಮೂಲಕ ಕೊಪ್ಪಳದ ಸರ್ಕಾರಿ ಇನ್ಸ್‌ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಉಚಿತ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಮಗನಿಗೆ ಮೆಡಿಕಲ್ ಸೀಟ್ ಸಿಕ್ಕಿದ್ದಕ್ಕೆ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ನನ್ನ ಓದಿನ ಹಿಂದೆ ತಂದೆ-ತಾಯಿ ಶ್ರಮ ಇದೆ. ತಂದೆ ಪೌರ ಕಾರ್ಮಿಕನಾಗಿ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಹೊಲಕ್ಕೆ ಹೋಗಿ ಕೂಲಿ ಕೆಲಸ ಮಾಡುತ್ತಾರೆ. ತಾವೂ ಕೂಡಿಟ್ಟ ಹಣದಲ್ಲಿ ನನ್ನನ್ನು ಓದಿಸಿ ಮೆಡಿಕಲ್ ಸೀಟ್ ಸಿಗುವಂತೆ ಮಾಡಿದ್ದಾರೆ. ಪಾಲಕರ ಆಶಯದಂತೆ ವೈದ್ಯನಾಗಿ ಬಡ ಜನರ ಸೇವೆ ಮಾಡುವ ಆಸೆ ಹೊಂದಿದ್ದೇನೆ.ಅಭಿಷೇಕ ಕಟ್ಟಿಮನಿ, ಮೆಡಿಕಲ್ ಸೀಟ್ ಪಡೆದ ವಿದ್ಯಾರ್ಥಿ