ಆಶ್ರಯ ಲೇಔಟ್ ಸಮಸ್ಯೆಗೆ ಶೀಘ್ರ ಪರಿಹಾರ

7 sgr 1
Published on

ಸಾಗರ: ನಗರದ ಜಂಬಗಾರು ಆಶ್ರಯ ಬಡಾವಣೆ ನಿವಾಸಿಗಳ ಸಮಸ್ಯೆ ಆಡಳಿತದ ಗಮನದಲ್ಲಿದ್ದು ಅದನ್ನು ಈಡೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಭರವಸೆ ನೀಡಿದರು.

ನಗರದ ಜಂಬಗಾರು ಬಡಾವಣೆಯ ಆಶ್ರಯ ಲೇಔಟ್​ಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿ ಮಾತನಾಡಿ, ಕಳೆದ ನಗರಸಭೆ ಆಡಳಿತಾವಧಿಯಲ್ಲಿ ಜಂಬಗಾರು ಆಶ್ರಯ ಲೇಔಟ್ ನಿರ್ವಿುಸಲಾಗಿತ್ತು. ಆದರೆ ಮೂಲ ಸೌಲಭ್ಯ ಕಲ್ಪಿಸಿರಲಿಲ್ಲ ಎಂದರು.

ಆಶ್ರಯ ಬಡಾವಣೆಯಲ್ಲಿ ನೀರು, ರಸ್ತೆ, ಬೀದಿದೀಪ, ವಿದ್ಯುತ್ ಸೌಲಭ್ಯ ಇಲ್ಲ. ಜನರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಇದರಿಂದ ಹೆಚ್ಚಿನ ಹಣ ವಿದ್ಯುತ್ ಬಿಲ್​ಗೆ ಪಾವತಿಸುತ್ತಿದ್ದಾರೆ. ಇದನ್ನು ಮನಗಂಡಿರುವ ನಗರಸಭೆ ತಕ್ಷಣ ಬಡಾವಣೆಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಹಾಗೂ ರಸ್ತೆ ಸೇರಿ ಮೂಲ ಸೌಲಭ್ಯ ಒದಗಿಸಲು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್ ಮಾತನಾಡಿ, ಆಶ್ರಯ ಲೇಔಟ್​ನಲ್ಲಿ 490 ನಿವೇಶನ ನೀಡಲಾಗಿದೆ. ಆದರೆ ಮೂಲ ಸೌಲಭ್ಯ ಇಲ್ಲ. ಜನ ಮನೆ ಕಟ್ಟಿದ್ದರೂ ಸೌಲಭ್ಯ ಇಲ್ಲದಿರುವುದರಿಂದ ವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ನಗರಸಭೆಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಅರ್ಥ ಮಾಡಿಕೊಂಡಿದ್ದೇವೆ. ಈಗಾಗಲೆ 56 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಒಂದೂವರೆ ತಿಂಗಳಿನಲ್ಲಿ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ವಾರ್ಡ್ ಸದಸ್ಯ ಗಣಪತಿ ಮಂಡಗಳಲೆ, ಏಕಾಂತಪ್ಪ, ನಗರಸಭೆ ಅಭಿಯಂತರಾದ ರಾಜೇಶ್, ವಿಠಲ್ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net