

ಬೀರೂರು: ಪಟ್ಟಣದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್ ತಿಳಿಸಿದ್ದಾರೆ.
ಮಾರ್ಗದ ಕ್ಯಾಂಪ್ ಬಡಾವಣೆಯಲ್ಲಿ ಸಾಕಷ್ಟು ಮಂಗಗಳು ಮನೆಗಳಿಗೆ ನುಗ್ಗಿ ಆಹಾರ ಧಾನ್ಯಗಳನ್ನು ಹಾಳು ಮಾಡುವುದು, ಇಟ್ಟ ವಸ್ತುಗಳನ್ನು ಎತ್ತಿಕೊಂಡು ಹೋಗುವುದು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಕುರಿತು ಹಲವಾರು ಜನ ಪುರಸಭೆಗೆ ದೂರು ನೀಡಿದ್ದರು.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸುವಂತೆ ನೀಡಿದ ಸಲಹೆ ಮೇರೆಗೆ ಅರಸೀಕೆರೆ ತಾಲೂಕು ಬಾಣಾವರದಿಂದ ಮಂಗ ಹಿಡಿಯುವವರನ್ನು ಕರೆಸಿ ಕ್ಯಾಂಪ್ ಬಡಾವಣೆಯ ಮಾರ್ಗದ ಮಹದೇವಪ್ಪ ಶಾಲೆ ಆವರಣ, ಪ್ರವಾಸಿ ಮಂದಿರ ರಸ್ತೆ, ಕೆಇಬಿ ಮುಂಭಾಗ ಮತ್ತು ಮಹಾನವಮಿ ಬಯಲಿನಲ್ಲಿ ಮಂಗಗಳನ್ನು ಹಿಡಿಯಲು ಬೋನ್‌ಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.