ಪೌರ ಕಾರ್ಮಿಕರ ಮುಷ್ಕರ ಹೆಚ್ಚಿದ ಕಸದ ಕಸಿವಿಸಿ

01 KLR 03
Published on

ಕೋಲಾರ: ಪೌರ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಅರ್ನಿದಿಷ್ಟ ಮುಷ್ಕರ ಕೈಗೊಂಡಿರುವುದರಿಂದ ಕೋಲಾರ ನಗರದಾದ್ಯಂತ ಕಸ ವಿಲೇವಾರಿಯಾಗದೆ ರಾಶಿಗಳಾಗಿ ಬಿದ್ದಿದ್ದು, ರಸ್ತೆಗಳಲ್ಲಿಯೂ ಎಲ್ಲೆಂದರಲ್ಲಿ ಕಸ ಕೊಳೆಯುತ್ತಿದ್ದು, ಗಬ್ಬು ವಾಸನೆ ಬರುತ್ತಿದೆ.

ಭಾನುವಾರವೂ ನಗರದಲ್ಲಿ ಪೌರಕಾರ್ಮಿಕರು ಸ್ವಚ್ಛತೆಗೆ ಇಳಿಯದೇ ಇದ್ದುದ್ದರಿಂದ ನಗರದ ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಮಟನ್​ ಮಾರುಕಟ್ಟೆ ಮುಂತಾದ ಕಡೆಗಳಲ್ಲಿ ಕಸದ ರಾಶಿಗಳು ಬಿದ್ದಿದ್ದು, ಓಡಾಡಲು ತೊಂದರೆಯಾಗುತ್ತಿದೆ.

ಎಂ.ಜಿ.ರಸ್ತೆ, ದೊಡ್ಡಪೇಟೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿಗಳು ಮತ್ತು ಕಸ ರಾರಾಜಿಸುವಂತೆ ಸಾರ್ವಜನಿಕರು ಅಸಹ್ಯ ಪಡುವಂತೆ ಆಗಿತ್ತು. ಕುಡಿಯುವ ನೀರಿನ ಸಮಸ್ಯೆ ಹಾಗೂ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಮನೆ ಮತ್ತು ಅಂಗಡಿ ಮಾಲೀಕರು ಕಸವನ್ನು ರಸ್ತೆಗಳಲ್ಲಿ ಸುರಿದು ಹೋಗುತ್ತಿದ್ದಾರೆ.

ನಗರದಲ್ಲಿ ನಾಯಿಗಳ ಸಂತತಿ ಹೆಚ್ಚಾಗಿರುವ ಕಾರಣ ಕಸದ ರಾಶಿಗಳಲ್ಲಿ ನಾಯಿಗಳ ದಂಡು ಹೆಚ್ಚಾಗಿದ್ದು, ಸಾರ್ವಜನಿಕರು ಮತ್ತು ಮಕ್ಕಳು ಹಾಗೂ ವೃದ್ಧರು ರಸ್ತೆಗಳಲ್ಲಿ ಓಡಾಡಲು ಭಯ ಬೀಳುವಂತಾಗಿದೆ. ಒಳಚರಂಡಿಗಳಲ್ಲಿ ನೀರು ಬ್ಲಾಕ್​ ಆಗಿದ್ದು, ರಸ್ತೆಗಳ ಮೇಲೆ ಹರಿಯುವಂತಾಗಿದೆ.

ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸುವುದು ಕಷ್ಟದ ಪರಿಸ್ಥಿತಿ ಎದುರಾಗಿದ್ದು, ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ತ್ಯಾಜ್ಯ, ಚರಂಡಿ ಸೇರಿ ನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ನೀರು ಹರಿಯುವಂತೆ ಆಗಿದೆ.

ಕೋವಿಡ್​ ಇರುವುದರಿಂದ ನಗರದ ಸ್ವಚ್ಛತೆಯಿಂದ ಕೂಡಿರಬೇಕು. ಪೌರಕಾರ್ಮಿಕರ ಸಮಸ್ಯೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಬಗೆಹರಿಸಬೇಕು. ಪೌರಕಾರ್ಮಿಕರ ಮುಷ್ಕರ ಇರುವುದರಿಂದ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದೇ ಇರುವುದರಿಂದ ಕಚೇರಿಯ ಕೆಲಸಗಳು ನಡೆಯುತ್ತಿಲ್ಲ. ಸದ್ಯಕ್ಕೆ ನೀರಿನ ಸಮಸ್ಯೆ ಉಂಟಾಗಿಲ್ಲ. ನೀರಿನ ಸಮಸ್ಯೆ ಉಂಟಾದರೆ ಕಷ್ಟ ಆಗುತ್ತದೆ. ಅಷ್ಟರೊಳಗಾಗಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕಾಗಿದೆ.

 -ಮುರಳಿಗೌಡ, ನಗರಸಭಾ ಅಧ್ಯಕ್ಷ

ಪೌರಕಾರ್ಮಿಕರ ಬೇಡಿಕೆ ಈಡೇರಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸೋಮವಾರ ಮಧ್ಯಾಹ್ನದ ಒಳಗೆ ರಾಜ್ಯಾದ್ಯಂತ ನಡೆಸುತ್ತಿರುವ ಪೌರಕಾರ್ಮಿಕರ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಸೋಮವಾರವೂ ಕಾರ್ಮಿಕರನ್ನು ಕರೆದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತೇವೆ. ಸದ್ಯಕ್ಕೆ ಒಳಚರಂಡಿ ಸಮಸ್ಯೆ ಸರಿಪಡಿಸಲಾಗುತ್ತಿದೆ.

-ಪ್ರಸಾದ್​ ನಗರಸಭಾ ಆಯುಕ್ತರು, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net