ಸಾಮಾಜಿಕ ಕಾರ್ಯಗಳಿಗೆ ಪುರಸಭೆ ಸಾಥ್

30KDR1
Published on

ಕಡೂರು: ರೋಟರಿ ಸಂಸ್ಥೆಯ ಸಾಮಾಜಿಕ ಕಳಕಳಿಗೆ ಪುರಸಭೆ ಸಾಥ್ ನೀಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಸಮೀಪದ ಹಿಂದು ರುದ್ರಭೂಮಿಯಲ್ಲಿ ಅನಿಲ ಚಿತಾಗಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ಹಿಂದೂ ರುದ್ರಭೂಮಿಯಲ್ಲಿ ಸುಮಾರು 30 ಲಕ್ಷ ವೆಚ್ಚದಡಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳು ಹೊರತುಪಡಿಸಿ ವಿಶೇಷವಾಗಿ ಸಶ್ಮಾನದ ಅಭಿವೃದ್ಧಿ ಪರಿಕಲ್ಪನೆಗೆ ಒತ್ತು ನೀಡಿದರೆ ಸಾರ್ವಜನಿಕರ ಬಳಕೆಗೆ ಹೆಚ್ಚು ಉಪಯೋಗವಾಗಲಿದೆ ಎಂಬ ಆಶಯ ನನ್ನದಾಗಿದೆ. ಇದಕ್ಕೆ ರೋಟರಿ ಸಂಸ್ಥೆ ಹೆಚ್ಚು ಕಾಳಜಿ ವಹಿಸಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯಕ್ಕೆ ಸ್ಥಳೀಯ ಶಾಸಕರು ಮತ್ತು ಪುರಸಭೆ ಅನುದಾನ ನೀಡುವ ಮೂಲಕ ಶಾಶ್ವತ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಮಾತನಾಡಿ, ರುದ್ರಭೂಮಿಯಲ್ಲಿ 120 ಅಡಿ ಎತ್ತರದ ಚಿಮಣಿ ನಿರ್ಮಾಣವಾಗಲಿದ್ದು, ಒಂದು ಶವದಹನಕ್ಕೆ 10 ಕೆಜಿ ಅನಿಲದ ಅಗತ್ಯವಿದೆ. ಒಟ್ಟು 19 ಸಿಲಿಂಡರ್ ಸದಾ ಲಭ್ಯವಿರುವಂತೆ ಯೋಜನೆ ರೂಪಿಸಲಾಗಿದೆ. ಸರ್ವ ಸಮಾಜದವರು, ಸಂಘ ಸಂಸ್ಥೆಗಳು ದೇಣಿಗೆ ನೀಡಿದ್ದಾರೆ. ರೋಟರಿಯ 56 ಸದಸ್ಯರು, ಶಾಸಕರು ಮತ್ತು ಪುರಸಭೆ ಸದಸ್ಯರು ಕೈಜೋಡಿಸಿದ್ದಾರೆ ಎಂದರು.
ಕಾಮಗಾರಿ ಆರಂಭಕ್ಕೆ ಸಂಗ್ರಹವಾದ ಮೊತ್ತದಲ್ಲಿ 5 ಲಕ್ಷ ಚೆಕ್‌ನ್ನು ಗುತ್ತಿಗೆದಾರ ರಮೇಶ್‌ಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಟಿ.ಡಿ.ರಾಜನ್, ಕಾರ್ಯದರ್ಶಿ ಚಂದ್ರಪ್ಪ, ರುದ್ರಭೂಮಿ ಸಮಿತಿ ಅಧ್ಯಕ್ಷ ಮುರುಳಿ ಕೊಠಾರಿ, ಮಂಜುನಾಥ್, ವಕೀಲ ಕೆ.ಜಿ.ಅಣ್ಣಪ್ಪ, ಪ್ರೇಮಬಿಂದು ಪ್ರತಿ?್ಟಾನದ ಅಧ್ಯಕ್ಷ ಪ್ರೇಮ್ ಕುಮಾರ್, ಬಿ.ಶಿವಕುಮಾರ್, ಟಿ.ಡಿ.ಸತ್ಯನ್, ಚಂದ್ರಪ್ಪ, ಚಿನ್ನರಾಜು, ಪುಂಡಲೀಕರಾವ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net