ಪೌರಕಾರ್ಮಿಕರ ಸಮಸ್ಯೆಗಳಿಗೆ ಪುರಸಭೆ ಸ್ಪಂದನೆ

Oplus_131072
Oplus_131072
Published on

ಚನ್ನರಾಯಪಟ್ಟಣ: ಸ್ವಚ್ಛತೆಯ ಆಸ್ತಿ ಪೌರಕಾರ್ಮಿಕರು. ಪಟ್ಟಣದ ಅಂದ ಹೆಚ್ಚಿಸುವ ಕೆಲಸ ಮಾಡುವ ಅವರ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಪುರಸಭೆ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪಂಪ್‌ಹೌಸ್‌ನ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನ ಏಳುವ ಮುನ್ನ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆ ಮಾಡಿ, ಸುಂದರವನ್ನಾಗಿಸುವ ಹಿನ್ನ್ನೆಲೆಯಲ್ಲಿ ಕಳೆದ ವರ್ಷ ಚನ್ನರಾಯಪಟ್ಟಣ ಪುರಸಭೆಗೆ ರಾಷ್ಟ್ರೀಯ ಸನ್ಮಾನದ ಗೌರವ ಸಿಕ್ಕಿದೆ. ಇದು ಪೌರಕಾರ್ಮಿಕರ ಶ್ರಮದಿಂದ ಸಾಧ್ಯವಾಗಿದೆ. ಅವರ ಗಣನೀಯ ಸೇವೆಯ ಫಲ ನಲ್ಲೂರು ಬಳಿಯಲ್ಲಿನ ಕಸ ವಿಲೇವಾರಿ ಘಟಕದಲ್ಲಿ ಕಸ ಬೇರ್ಪಡಿಸಿ ಗೊಬ್ಬರವನ್ನಾಗಿಸುವ ಕಾರ್ಯಕ್ಕೆ ಸರ್ಕಾರ ಸಲಕರಣೆ, ಯಂತ್ರೋಪಕರಣಕ್ಕಾಗಿ ಅನುದಾನ ನೀಡಿದೆ ಎಂದರು.
ಪೌರಕಾರ್ಮಿಕರ ಆರೋಗ್ಯದಿಂದ ಪಟ್ಟಣದ ಆರೋಗ್ಯವಾಗಿರಲು ಸಾಧ್ಯ. ಅವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.


ಪೌರಕಾರ್ಮಿಕರ ಕೋರಿಕೆ ಮೇರೆಗೆ ಪಟ್ಟಣಕ್ಕೆ ಹತ್ತಿರವಾಗಿ ಮಾರೇನಹಳ್ಳಿ ವ್ಯಾಪ್ತಿಯಲ್ಲಿ 3 ಎಕರೆ 18 ಗುಂಟೆ ಜಾಗವನ್ನು ನಿವೇಶನಕ್ಕಾಗಿ ಗುರ್ತಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಅಂಕಿತ ಹಾಕಿ ಪೌರಕಾರ್ಮಿಕರ ಮೀಸಲು ಜಾಗ ಎಂಬುದಾಗಿ ಕಾಯ್ದಿರಿಸಿದ್ದಾರೆ. ಸದ್ಯದಲ್ಲೇ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಭರವಸೆ ನೀಡಿದರು.
ಪಟ್ಟಣ ಸ್ವಚ್ಛತೆ ದೃಷ್ಟಿಯಿಂದ ಮೂರು ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಎರಡು ದಿನದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗುವುದು. ಕ್ರೀಡಾಪಟುಗಳ ಅನುಕೂಲತೆಗಾಗಿ ತಾಲೂಕು ಕ್ರೀಡಾಂಗಣ, ಗೂರನಹಳ್ಳಿ ಬಡಾವಣೆ ಮತ್ತು ಮೈಸೂರು ರಸ್ತೆಯಲ್ಲಿನ ಆಂಬೇಡ್ಕರ್ ವೃತ್ತದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗುವುದು. ಇದರೊಂದಿಗೆ ಇನ್ನೂ 3 ಶೌಚಗೃಹ ನಿರ್ಮಿಸಲಾಗುವುದು ಎಂದರು.
ಸಮಾರಂಭದಲ್ಲಿ ಅತ್ಯುತ್ತಮ ಪೌರಕಾರ್ಮಿರಾದ ಕೆ.ಕೆ.ಪ್ರದೀಪ್‌ಕುಮಾರ್, ಪವನ್‌ಕುಮಾರ್, ನವೀನ್‌ಕುಮಾರ್, ಸಿ.ಎಸ್.ಅಜಯ್, ನಾಗಮ್ಮ, ರವಿಕುಮಾರ್, ಶರತ್, ಬಿ.ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಗೆದ್ದ ಪೌರಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಸಕರು ವೈಯಕ್ತಿಕವಾಗಿ ಹೊಸ ಬಟ್ಟೆ ವಿತರಣೆ ಮಾಡಿದರು.


ಮೃತ ನಾಲ್ವರು ಪೌರಕಾರ್ಮಿಕರಾದ ನಲ್ಲಮ್ಮ, ಅಣ್ಣಪ್ಪ, ಮಹೇಶ್, ಭಾಸ್ಕರ್ ಅವರಿಗೆ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಪುರಸಭಾಧ್ಯಕ್ಷೆ ಬನಶಂಕರಿ ರಘು, ಉಪಾಧ್ಯಕ್ಷ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಸುರೇಶ್, ಸದಸ್ಯರಾದ ರೇಖಾ ಅನಿಲ್, ನವೀನ್‌ಕುಮಾರ್, ಮೋಹನ್‌ಕುಮಾರ್, ಸುಜಾತಾ, ಲಕ್ಷ್ಮೀ, ಕವಿತಾರಾಜು, ಫರ್ಹಾನ್ ಭಾನು, ಗಣೇಶ್, ಧರಣೇಶ್, ನಾಮ ನಿರ್ದೇಶಿತ ಸದಸ್ಯರಾದ ಉಮಾಶಂಕರ್, ರವಿ, ಮುಖ್ಯಾಧೀಕಾರಿ ಹೇಮಂತ್‌ಕುಮಾರ್, ಪರಿಸರ ಇಂಜಿನಿಯರ್ ರೆ ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net