ನಗರಸಭೆಯ ಆಸ್ತಿ ಕಬಳಿಸಿಲ್ಲ

PHOTO-3-05
Published on

ಚಿತ್ರದುರ್ಗ: ನಾನು ಯಾವುದೇ ಸರ್ಕಾರಿ ಆಸ್ತಿ ಕಬಳಿಸಿಲ್ಲ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು ಎಂದು ಮಾಜಿ ಸದಸ್ಯ ಬಿ.ಎಲ್.ರವಿಶಂಕರ್ ಬಾಬು ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯ ಕೋಟ್ಯಂತರ ರೂ. ಮೌಲ್ಯದ ಆಸ್ತಿ ನುಂಗಿದ್ದೇನೆ ಎಂಬ ನನ್ನ ಮೇಲೆ ನವೀನ್ ಗುರುತರ ಆರೋಪ ಮಾಡಿದ್ದು, ದಾಖಲೆ ಸಹಿತ ಸ್ಪಷ್ಟಪಡಿಸಬೇಕೆ ಹೊರತು ತೇಜೋವಧೆ ಮಾಡುವುದು ಸರಿಯಲ್ಲ. ಇದನ್ನು ಮುಂದುವರಿಸಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ನನ್ನ ಅಳಿಯ ಕಾರೇಹಳ್ಳಿ ಉಲ್ಲಾಸ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದು, ಅವರು ಸ್ಥಿತಿವಂತರು. ಹೊಸದುರ್ಗ ತಾಲೂಕಿನಲ್ಲಿ ನೂರಾರು ಎಕರೆ ಆಸ್ತಿ ಇದೆ. ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ 40/35 ನಿವೇಶನವೊಂದನ್ನು 2016ರಲ್ಲಿ ಪಾರದರ್ಶಕವಾಗಿ 19.6 ಲಕ್ಷ ರೂ.ಗೆ ಖರೀದಿಸಿದ್ದಾರೆ. ಇದಕ್ಕೆ ಕಾನೂನಾತ್ಮಕ ದಾಖಲೆಗಳಿವೆ. ಹೀಗಿದ್ದರೂ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜೆಸಿಆರ್ ಬಡಾವಣೆಯಲ್ಲಿ ಈ ಹಿಂದೆ ಇದ್ದ ಡಾಂಬರೀಕರಣದ ರಸ್ತೆಗಳು ಚೆನ್ನಾಗಿದ್ದವು. ಅದನ್ನು ಕಿತ್ತು ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಲ್ಲೂ ಕಮಿಷನ್ ಪಡೆಯಲಾಗಿದೆ. ಇದಕ್ಕೆ ಇತರೆ ಅನುದಾನದಡಿ 2 ವರ್ಷದ ಹಿಂದೆ ಬಿಲ್ ಆಗಿದ್ದರೂ ನಗರಸಭೆಯ ಸ್ಥಳೀಯ ಅಭಿವೃದ್ಧಿ ಅನುದಾನದಡಿ ಮತ್ತೊಮ್ಮೆ ಬಿಲ್ ಮಾಡಿಕೊಂಡಿದ್ದಾರೆ. ನಗರಸಭೆಯ ಆಡಳಿತ ಸಂಪೂರ್ಣ ಶಾಸಕರ ಕೈಯಲ್ಲಿದ್ದು, ಭ್ರಷ್ಟಾಚಾರದ ತಾಣವಾಗಿದೆ ಎಂದು ದೂರಿದರು.

ವಕೀಲ ಪಿ.ಲೀಲಾಧರ್ ಠಾಕೂರ್ ಮಾತನಾಡಿ, 2014-15ರಿಂದ 2018-19ರವರೆಗೂ ನಗರ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ರಾಜ್ಯ ಸರ್ಕಾರದ ಅನುದಾನದಡಿ ಅನೇಕ ಕೊಳವೆಬಾವಿ ಕೊರೆಸಿ, ಮೋಟಾರ್, ಪೈಪ್‌ಲೈನ್ ಅಳವಡಿಸಲಾಗಿದೆ. ಈ ಸಂಬಂಧ ಒಂದೆರಡು ನಿಮಿಷದ ಅವಧಿಯಲ್ಲೇ ಏಕಕಾಲಕ್ಕೆ ಹಲವು ಬಡಾವಣೆಗಳಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ತಿಪ್ಪಾರೆಡ್ಡಿ ಅವರೇ ಹೊಣೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net