ಟೇಸ್ಟಿಂಗ್ ಪೌಡರ್ ಬಳಕೆ ವಿರುದ್ಧ ಪುರಸಭೆ ಕಾರ್ಯಾಚರಣೆ

04 GJD 2
Published on

ಗಜೇಂದ್ರಗಡ: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಕಂದಾಯ ಇಲಾಖೆ, ಆಹಾರ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಬುಧವಾರದಿಂದ ಎರಡು ದಿನ ದಾಳಿ ನಡೆಸಿ ಅಂಗಡಿ ಪರವಾನಗಿ ಪರಿಶೀಲಿಸಿ, ನಿಷೇಧಿತ ಪ್ಲಾಸ್ಟಿಕ್, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದರು.
ಕಾಲಕಾಲೇಶ್ವರ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ, ಕುಷ್ಟಗಿ ರಸ್ತೆಯಲ್ಲಿನ ಹೋಟೆಲ್‌ಗಳು ಹಾಗೂ ಬಸ್ ನಿಲ್ದಾಣದ ವರೆಗಿನ ರಸ್ತೆಯ ಎರಡೂ ಬದಿಯ ಅಂಗಡಿ, ಹೋಟೆಲ್‌ಗಳನ್ನು ಪರಿಶೀಲಿಸಿದರು.
ನಿಷೇಧಿತ ಪ್ಲಾಸ್ಟಿಕ್ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಕಿರಾಣಿ ಅಂಗಡಿಗಳು, ಡಬ್ಬಾ ಅಂಗಡಿಗಳು, ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದರು. ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಟೇಸ್ಟಿಂಗ್ ಪೌಡರ್ ಬಳಸುತ್ತಿರುವ ಕುರಿತು ಪರಿಶೀಲಿಸಿದರು. ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದ ಹೋಟೆಲ್‌ಗಳಿಗೆ ಬೀಗ ಹಾಕಲಾಯಿತು.
ಪಟ್ಟಣದಲ್ಲಿ ಬುಧವಾರ 40ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ಪರಿಶೀಲಿಸುವುದರ ಜತೆಗೆ 20 ಕೆಜಿ ತಂಬಾಕು ಉತ್ಪನ್ನಗಳು, 35 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ. ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದ ರಾಜ್ ಟಿಪಿನ್ ಸೆಂಟರ್ ಸೀಜ್ ಮಾಡಲಾಯಿತು.
ಪಟ್ಟಣದ ವಿವಿಧ ಅಂಗಡಿಗಳ ಮಾಲಿಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರವಾನಗಿ ಪಡೆದಿರುವವರು ಸಕಾಲದಲ್ಲಿ ನವೀಕರಣವನ್ನೂ ಮಾಡಿಸಿಕೊಳ್ಳಬೇಕು. ನಿಷೇಧಿತ ಪ್ಲಾಸ್ಟಿಕ್, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ಅವುಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಹೋಟೆಲ್‌ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರ ಜತೆಗೆ ಟೇಸ್ಟಿಂಗ್ ಪೌಡರ್ ಬಳಸುವಂತಿಲ್ಲ’ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಆಹಾರ ಇಲಾಖೆಯ ಪ್ರಭಾರಿ ಆಹಾರ ನಿರೀಕ್ಷಕಿ ಶಾಂತಾಬಾಯಿ ಚವಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಆರೋಗ್ಯ ಅಧಿಕಾರಿ ಶಿವಕುಮಾರ ಇಲಾಳ, ಪುರಸಭೆ ಸಿಬ್ಬಂದಿ ನಜೀರಸಾಬ್ ಸಾಂಗ್ಲೀಕರ, ರಾಘವೇಂದ್ರ ಮಂತಾ, ಗ್ರಾಮ ಆಡಳಿತಾಧಿಕಾರಿ ಉಮೇಶ ಅರಳಿಗಿಡದ, ಪೊಲೀಸ್ ಇಲಾಖೆಯ ಡಿ.ಎಂ. ಕಟ್ಟಿಮನಿ, ಸುರೇಶ ಮಂತಾ, ಪ್ರಕಾಶ ಭೂಸನೂರಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net