ಮುಂಗಾರು ಮಳೆ ಎದುರಿಸಲು ಸಿದ್ಧತೆಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ

BBMP Head Office
Published on

ಬೆಂಗಳೂರು: ಮಹಾನಗರದಲ್ಲಿ ಮುಂಗಾರು ಮಳೆ ವೇಳೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆ ನಿವಾರಣೆ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ವಿಪತ್ತು ನಿರ್ವಹಣೆ ಕಾಯ್ದೆಯಡಿ ಅಗತ್ಯ ಕ್ರಮಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಆಯಾ ಅಧಿಕಾರಿಗಳು ವಲಯ ಆಯುಕ್ತರನ್ನು ಭೇಟಿ ಮಾಡಿ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಈಗಾಗಲೇ ಕಾರ್ಯಸೂಚಿ (ಎಸ್‌ಒಪಿ) ಸಿದ್ದಪಡಿಸಿದ್ದು, ಅದರನ್ವಯ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ:

ನಗರದಲ್ಲಿ 198 ಪ್ರವಾಹ ಪೀಡಿತ ಪ್ರದೇಶಗಳ ಜತೆಗೆ ಹೊಸದಾಗಿ 11 ಪ್ರದೇಶಗಳು ಸೇರಿ ಒಟ್ಟು 209 ಪ್ರವಾಹ ಪೀಡಿತ ಪ್ರದೇಶಗಳಿವೆ. ಈ ಪೈಕಿ ಈಗಾಗಲೇ 166 ಸ್ಥಳಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಬಾಕಿ 43 ಪ್ರದೇಶಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಖುದ್ದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ನಿರ್ದೇಶಿಸಿದರು.

ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 180 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗವು ಗುರುತಿಸಿದ್ದು, ಈ ಪೈಕಿ ಇಂಜಿನಿಯರ್‌ಗಳು ಪಟ್ಟಿ ಅನುಸಾರ ಸ್ಥಳ ಪರಿಶೀಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಜತೆಗೆ ರಸ್ತೆ ಬದಿ ಅಳವಡಿಸಿರುವಂತಹ ಗ್ರೇಟಿಂಗ್ಸ್‌ಗಳ ಬಳಿ ತ್ಯಾಜ್ಯ ಸ್ವಚ್ಛಗೊಳಿಸಿ ಸೈಡ್ ಡ್ರೈನ್‌ಗಳಿಗೆ ಸರಾಗವಾಗಿ ಮಳೆನೀರು ಹರಿದು ಹೋಗುವಂತೆ ನಿಗಾ ಇಡಲು ಸೂಚಿಸಿದರು.

ಅಗ್ನಿಶಾಮಕ ಠಾಣೆಗಳೊಂದಿಗೆ ಸಂಪರ್ಕದಲ್ಲಿರಿ:

ಪಾಲಿಕೆ ವ್ಯಾಪ್ತಿಯಲ್ಲಿ 20 ಅಗ್ನಿಶಾಮಕ ಠಾಣೆಗಳು ಹಾಗೂ ಎಸ್‌ಡಿಆರ್‌ಎನ 1 ಕಂಪನಿ ಇದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಅಗ್ನಿಶಾಮಕ ಠಾಣೆಗಳ ಜತೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿರಬೇಕು. ಜತೆಗೆ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳ ಪಟ್ಟಿಯನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಜಲಮಂಡಳಿಯ ಸೂಪರ್ ಸಕ್ಕರ್ ಹಾಗೂ ಜಟ್ಟಿಂಗ್ ಯಂತ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಪಟ್ಟಿ ಕೂಡಾ ಪಡೆಯಲು ನಿರ್ದೇಶಿಸಿದರು.

ರಾಜಕಾಲುವೆಗಳಲ್ಲಿ ಜೆಸಿಬಿಗಳ ಮೂಲಕ ಹೂಳು ತೆರವುಗೊಳಿಸಿ ಸ್ವಚ್ಚಗೊಳಿಸಬೇಕು. ಮಳೆನೀರುಕಾಲುವೆಗಳಲ್ಲಿ ಸ್ವಚ್ಚತೆಗೆ 2 ತಿಂಗಳ ಯೋಜನೆ ರೂಪಿಸಿ ಮಾಹಿತಿ ನೀಡಬೇಕು. ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸುವಂತೆ ಮುಖ್ಯ ಆಯುಕ್ತರು ವಿವರಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್‌ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಆಯುಕ್ತರು, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಅಗ್ನಿಶಾಮಕ, ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರಿ ಸಮಸ್ಯಾತ್ಮಕ ಪ್ರದೇಶಗಳಿವು:

* ಸಾಯಿ ಲೇಔಟ್

* ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಕೋಗಿಲು ಕ್ರಾಸ್

* ಪೈ ಲೇಔಟ್, ಸರ್ಜಾಪುರ ರಸ್ತೆ (ಇಬ್ಬಲೂರು ಜಂಕ್ಷನ್)

* ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ (ಮೈಸೂರು ರಸ್ತೆ)

* ಅಬ್ಬಿಗೆರೆ ಕೆರೆ ಕೋಡಿ

ನಿಯಂತ್ರಣ ಕೊಠಡಿಗೆ ನಿಯೋಜನೆ:

ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳನ್ನು ನಿಯೋಜಿಸಬೇಕು. ಇದಕ್ಕಾಗಿ ಕೂಡಲೆ ಇಲಾಖಾವಾರು ಅಧಿಕಾರಿಗಳ ಪಟ್ಟಿಯ ಜತೆಗೆ ಎಸ್‌ಡಿಆರ್‌ಎಫ್​/ಎನ್‌ಡಿಆರ್‌ಎಫ್​ ಅಧಿಕಾರಿಗಳ ಪಟ್ಟಿ ಸಿದ್ದಪಡಿಸಬೇಕು. ನಿಯಂತ್ರಣ ಕೊಠಡಿಗಳಲ್ಲಿ ಮಳೆಗಾಲಕ್ಕೆ ಅಗತ್ಯವಿರುವ ಎಲ್ಲ ಉಪಕರ ಶೇಖರಿಸಿಕೊಳ್ಳಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net