

ವಿರಾಜಪೇಟೆ: ವೈದ್ಯಕೀಯ ತ್ಯಾಜ್ಯವನ್ನು ರಸ್ತೆಗೆ ಸುರಿದಿದ್ದ ವಿರಾಜಪೇಟೆ ನಗರದ ಅಮಲಾ ಸ್ಪೆಷಾಲಿಟಿ ಕ್ಲಿನಿಕ್‌ಗೆ ಸಾರ್ವಜನಿಕ ಹಿತಾಸಕ್ತಿ ನಿರ್ಲಕ್ಷೃ ಪ್ರಕರಣದಡಿ ವಿರಾಜಪೇಟೆ ಪುರಸಭೆಯು ಸೋಮವಾರ 2 ಸಾವಿರ ರೂ. ದಂಡ ವಿಧಿಸಿದೆ.
ಮುಂಜಾನೆ ಪುರಸಭೆಯ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ ಹಾಗೂ ಪುರಸಭೆಯ ಸಿಬ್ಬಂದಿ ನಗರದಲ್ಲಿ ಕಸ ವಿಲೇವಾರಿ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡುತಿದ್ದ ವೇಳೆ ಅಮಲಾ ಕ್ಲಿನಿಕ್ ಎದುರಿನಲ್ಲಿ ಕಪ್ಪು ಪ್ಲಾಸ್ಟಿಕ್ ಚೀಲ ಗೋಚರಿಸಿದೆ. ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಉಪಯೋಗಿಸಿದ ಸಿರೇಂಜ್, ಚುಚ್ಚುಮದ್ದು (ಸೂಜಿ) ಹ್ಯಾಂಡ್‌ಗ್ಲೌಸ್, ಟ್ಯೂಬ್, ಸೆಟ್, ಕ್ಲಿನಿಕ್‌ನ ನಗದು ರಸೀದಿಗಳು ಲಭ್ಯವಾಗಿದೆ.
ವೈದ್ಯಕೀಯ ತ್ಯಾಜ್ಯಗಳನ್ನು ನಗರದಲ್ಲಿ ಎಲ್ಲೆಂದರಲ್ಲಿ ಬಿಸಾಕುವುದು ಕಾನೂನಿಗೆ ವಿರುದ್ಧವಾಗಿದೆ. ದಿನನಿತ್ಯ ಇಂತಹ ತ್ಯಾಜ್ಯ ನಿರ್ವಹಣೆ ಮಾಡುವ ವೇಳೆ ಪುರಸಭೆ ಸಿಬ್ಬಂದಿಗೆ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ? ಎಂದು ಕ್ಲಿನಿಕ್ ಸಿಬ್ಬಂದಿಗೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ತರಾಟೆಗೆ ತೆಗೆದುಕೊಂಡರು.
ವೈದ್ಯಕೀಯ ತ್ಯಾಜ್ಯವನ್ನು ಖಾಸಗಿ ಸಂಸ್ಥೆಯೊಂದು ಸಾಗಿಸುತ್ತದೆ. ಪ್ರತಿ ಮೂರು ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹಣ ವಾಹನ ಸ್ಥಳಕ್ಕೆ ಆಗಮಿಸಿ ತ್ಯಾಜ್ಯ ಸಂಗ್ರಹಿಸುವ ಕಾರ್ಯ ಮಾಡುತ್ತಿದೆ. ಪ್ರತಿ ಆಸ್ಪತ್ರೆ ಮತ್ತು ಕ್ಲಿನಿಕ್‌ನಲ್ಲಿ ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯಗಳನ್ನು ನಿರ್ದಿಷ್ಟವಾದ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ತ್ಯಾಜ್ಯ ವಾಹನಕ್ಕೆ ನೀಡಬೇಕು. ಅಲ್ಲದೆ ಪೂರ್ವ ನಿಗದಿತ ಹಣವನ್ನು ಕ್ಲಿನಿಕ್ ಮತ್ತು ಆಸ್ಪತ್ರೆಗಳು ನೀಡಬೇಕು ಎನ್ನುವ ಕಾನೂನು ಇದ್ದರೂ ಕಾನೂನು ಉಲ್ಲಂಘನೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದರು.
ಪುರಸಭೆಯ ಪರಿಸರ ಇಂಜಿನಿಯರ್ ರೀತುಸಿಂಗ್, ಪ್ರಭಾರ ಆರೋಗ್ಯ ಆಧಿಕಾರಿ ಕೋಮಲಾ, ಪೌರಕಾರ್ಮಿರಾದ ಕವಿತಾ ಮತ್ತು ಸುಮಿತ್ರಾ ಹಾಜರಿದ್ದರು.