

ಹರಿಹರ: ನಗರದ ಆಸ್ತಿಗಳ ನೋಂದಣಿ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಕೈ ಬಿಡಬೇಕೆಂದು ಸರ್ವ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ತುರ್ತು ಸಭೆಯಲ್ಲಿ ಆಸ್ತಿಗಳ ತೆರಿಗೆ ಪರಿಷ್ಕರಣೆ ಕುರಿತು ಚರ್ಚೆ ನಡೆಯಿತು.
ಹಿರಿಯ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಆಸ್ತಿ ನೋಂದಣಿ ದರ ದಾವಣಗೆರೆ ಹಾಗೂ ರಾಣೆಬೆನ್ನೂರು ನಗರಗಳ ದರಕ್ಕಿಂತ ಹೆಚ್ಚಾಗಿದ್ದು ಕಡಿಮೆಗೊಳಿಸಬೇಕು. ಆಸ್ತಿಗಳ ನೋಂದಣಿ ದರವೇ ದೋಷಪೂರಿತವಾಗಿದೆ. ಹೀಗಿರುವಾಗ ಅದನ್ನಾಧರಿಸಿ ತೆರಿಗೆ ಪರಿಷ್ಕರಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ನಗರಸಭಾ ಸದಸ್ಯ ಕೆ.ಬಿ. ರಾಜಶೇಖರ್ ಮಾತನಾಡಿ, ನಗರದ ಹಳೆ ಪಿಬಿ ರಸ್ತೆ ಪಕ್ಕದ ಆಸ್ತಿಗಳ ನೋಂದಣಿ ದರ ಚದರ ಮೀ.ಗೆ 20 ರಿಂದ 30 ಸಾವಿರ ರೂ. ನಿಗದಿಪಡಿಸಲಾಗಿದೆ. ಈ ದರ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲೂ ಇಲ್ಲ. ಹತ್ತಾರು ವರ್ಷಗಳಿಂದ ಜನರ ಮೇಲಿರುವ ಈ ಹೊರೆಯನ್ನು ಇಳಿಸಲು ನಗರಸಭೆಯಿಂದ ಸಂಬಂಧಿತ ಇಲಾಖಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ಸೂಚಿಸಿದರು.
ಸದಸ್ಯ ಎಂ.ಆರ್. ಮುಜಮ್ಮಿಲ್ ಮಾತನಾಡಿ, ತೆರಿಗೆ ಪರಿಷ್ಕರಣೆ ಮಾಡಿದರೆ ವಾರ್ಷಿಕ 30 ಲಕ್ಷ ರೂ. ಆದಾಯ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಗರದ ಹಲವು ಕಲ್ಯಾಣ ಮಂಟಪಗಳಿಂದ ಐದಾರು ಕೋಟಿ ರೂ. ತೆರಿಗೆ ಬಾಕಿ ಇದ್ದು, ಅದನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ನಗರಸಭೆಗೆ ಹೆಚ್ಚು ಆದಾಯ ಬರಲಿದೆ ಎಂದರು.
ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ ಮಾತನಾಡಿ, ಈಗಾಗಲೆ 2 ನೋಟಿಸ್ ನೀಡಲಾಗಿದೆ. 3 ನೇ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿ- ಖಾತಾ ಆಂದೋಲನ ನಿಧಾನಗತಿ: ಬಿ- ಖಾತಾ ಆಂದೋಲನದಲ್ಲಿ ಈಗಾಗಲೆ 650 ಅರ್ಜಿಗಳು ಬಂದಿವೆ. ಈ ಪೈಕಿ ಕೇವಲ 25 ಜನರಿಗೆ ಇ- ಖಾತಾ ನೀಡಿದ್ದು, ಈ ಪ್ರಕ್ರಿಯೆ ವೇಗಗೊಳಿಸಬೇಕು. ಸರ್ಕಾರದ ಯೋಜನೆಯ ಲಾಭ ಜನಸಾಮಾನ್ಯರಿಗೆ ತಲುಪಬೇಕು ಎಂದು ಸದಸ್ಯ ದಾದಾ ಖಲಂದರ್ ಗಮನ ಸೆಳೆದರು.
ನಗರಸಭೆ ಉಪಾಧ್ಯಕ್ಷ ಎಂ. ಜಂಬಣ್ಣ, ಸದಸ್ಯರಾದ ಆರ್.ಸಿ. ಜಾವೀದ್, ರತ್ನ ಡಿ. ಉಜ್ಜೇಶ್, ವಿರೂಪಾಕ್ಷಪ್ಪ, ರೇಷ್ಮಾ ಬಾನು, ಜಾಕಿರ್ ಹುಸೇನ್, ಸೈಯದ್ ಅಬ್ದುಲ್ ಅಲೀಂ, ಎಸ್.ಎಂ. ಬಾಬುಲಾಲ್, ಪಕ್ಕೀರಮ್ಮ ರೇವಣಸಿದ್ದಪ್ಪ, ಸುಮಿತ್ರಾ ಮರಿದೇವ, ನಿಂಬಕ್ಕ ಚಂದಾಪುರ, ಲಕ್ಷ್ಮೀ ಮೋಹನ ದುಗೋಜಿ, ಷಹಜಾದ್ ಸನಾಉಲ್ಲಾ, ಸಂತೋಷ್ ದೊಡ್ಮನಿ, ಉಷಾ ಮಂಜುನಾಥ್ ಹಾಗೂ ಇತರರಿದ್ದರು.