

ಕೊಳ್ಳೇಗಾಲ : ನಗರಸಭೆಯ ನೂತನ ಅಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ಮತ್ತು ಉಪಾಧ್ಯಕ್ಷ ಎ.ಪಿ.ಶಂಕರ್ ಅವರು ಸೋಮವಾರ ಬೆಳಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಎಲ್ಲ ನಗರಸಭಾ ಸದಸ್ಯರ ಸಮ್ಮುಖದಲ್ಲಿ ನಗರಸಭಾ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ಮಾತನಾಡಿ, ಪಟ್ಟಣದ ರಸ್ತೆಗಳ ಅಭಿವೃದ್ಧಿ ಸೇರಿದಂತೆ 24/7 ಶುದ್ದ ಕುಡಿಯುವ ನೀರು ಪೂರೈಕೆ, ಒಳಚರಂಡಿ ಸೇವೆಯನ್ನು ಜನರಿಗೆ ಸಮರ್ಪಕವಾಗಿ ನೀಡಲು ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ನಗರಸಭೆ ಎಲ್ಲ ಸದಸ್ಯರೊಡಗೂಡಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಗರಸಭೆಗೆ 2ನೇ ಬಾರಿಗೆ ನಗರಸಭೆ ಅಧ್ಯಕ್ಷರಾಗಿ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ಖಾತಾ ಆಂದೋಲನ ಕಾರ್ಯಕ್ರಮವನ್ನು ಮುಂದುವರೆಸುವ ಬಗ್ಗೆ ಚಿಂತಿಸಲಾಗಿದೆ. ಪಟ್ಟಣದಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವುದು ನನ್ನ ಮೊದಲ ಆದ್ಯತೆ ಕೆಲಸವಾಗಿದೆ ಎಂದರಲ್ಲದೇ, ಸಾರ್ವಜನಿಕ ವಾಹನಗಳ ನಿಲುಗಡೆ ನಗರಸಭೆಯ ಸ್ಥಳವನ್ನು ಗುರುತಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ನಗರಸಭಾ ಉಪಾಧ್ಯಕ್ಷ ಎ.ಪಿ.ಶಂಕರ್ ಮಾತನಾಡಿ, ನಾನು 2ನೇ ಬಾರಿಗೆ ನಗರಸಭೆಗೆ ಉಪಾಧ್ಯಕ್ಷರಾಗಲು ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕರು ಹಾಗೂ 31 ನಗರಸಭಾ ಸದಸ್ಯರು ಸಹಕರಿಸಿದ್ದಾರೆ. ಇವರೆಲ್ಲರ ವಿಶ್ವಾಸ ಉಳಿಸಿಕೊಂಡು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಟ್ಟಣದ 31 ವಾರ್ಡ್‌ಗಳಲ್ಲಿ ಆಗಬೇಕಾಗಿರುವ ಕೆಲಸಗಳು ಸಾಕಷ್ಟಿವೆ. ಅವೆಲ್ಲವನ್ನು ಜನರ ನಿರೀಕ್ಷೆಗೆ ತಕ್ಕಂತೆ ಉತ್ತಮ ರೀತಿಯಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸನ್ಮಾನಿಸಿದರು. ನಗರಸಭಾ ಸದಸ್ಯರಾದ ಬಸ್ತಿಪುರ ಶಾಂತರಾಜು, ರಾಘವೇಂದ್ರ, ಭಾಗ್ಯಾ, ಕವಿತಾ, ಪುಷ್ಪಲತಾ, ಸುಮಾ, ಮಂಜು ನಾಥ್, ಸುರೇಶ್, ಕವಿತಾ, ರಾಮಕೃಷ್ಣ, ನಾಸೀರ್ ಷರೀಫ್, ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಸ್ತೀಪುರ ರವಿ, ಮುಖಂಡರಾದ ಬಸ್ತಿಪುರ ಸ್ವಾಮಿನಂಜಪ್ಪ ಹಾಗೂ ಭೀಮನಗರ ಯಜಮಾನರು ಇದ್ದರು.
ನಗರಸಭೆಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರೊಡಗೂಡಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಮುಂದಿನ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಎ.ಆರ್.ಕೃಷ್ಣಮೂರ್ತಿ ಶಾಸಕ