

ಜಮಖಂಡಿ: ಸ್ಥಳೀಯ ನಗರಸಭೆ ನೂತನ ಅಧ್ಯಕ್ಷರಾಗಿ ಪರಮಗೊಂಡ ಗವರೋಜಿ ಹಾಗೂ ಉಪಾಧ್ಯಕ್ಷೆಯಾಗಿ ರೇಖಾ ಕಾಂಬಳೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸಿ ಶ್ವೇತಾ ಬೀಡಿಕರ ತಿಳಿಸಿದರು.
ಜಮಖಂಡಿ ನಗರ ಸಭೆಯಲ್ಲಿ ಒಟ್ಟು 31 ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ 20 ಜನ ಸದಸ್ಯರು ಮತ್ತು 4 ಜನ ಪಕ್ಷೇತರ ಸದಸ್ಯರು ಒಳಗೊಂಡ 24 ಮತಗಳಿಂದ ಕಾಂಗ್ರೆಸ್ ಸಂಪೂರ್ಣ ಬಹುಮತಹೊಂದಿತ್ತು.
ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ಪರಮಗೊಂಡ ಗವರೋಜಿ ಸುಲಭವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ ನಗರದ ಪ್ರಥಮ ಪ್ರಜೆಯ ಗೌರವಕ್ಕೆ ಪಾತ್ರರಾದರು. ಉಪಾಧ್ಯಕ್ಷೆಯಾಗಿ ರೇಖಾ ಕಾಂಬಳೆ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ವಾರ್ಡ್ 11ರ ಪರಮಗೊಂಡ ಗವರೋಜಿ, 6ನೇ ವಾರ್ಡಿನ ಬಿಜೆಪಿ ಬೆಂಬಲಿತ ಸದಸ್ಯೆ ಅನುಸುಯಾ ಅಸುಗಡೆ, 21ನೇ ವಾರ್ಡಿನ ಗುರುಪಾದ ಮೆಂಡಿಗೇರಿ ನಾಮಪತ್ರ ಸಲ್ಲಿಸಿದ್ದರು. ಕೊನೇ ಕ್ಷಣದಲ್ಲಿ ಗುರುಪಾದ ಮೆಂಡಿಗೇರಿ ತಮ್ಮ ನಾಮಪತ್ರ ವಾಪಸ್ಸು ಪಡೆದರು.
ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ 13ನೇ ವಾರ್ಡಿನ ರೇಖಾ ಕಾಂಬಳೆ, 30ನೇ ವಾರ್ಡಿನ ಬಿಜೆಪಿ ಬೆಂಬಲಿತ ಸದಸ್ಯ ಕುಶಾಲ ವಾಗಮೋರೆ ನಾಮ ಪತ್ರ ಸಲ್ಲಿಸಿದ್ದರು.
ಪರಮಗೊಂಡ ಗವರೋಜಿ, (ಅಧ್ಯಕ್ಷ) ರೇಖಾ ಕಾಂಬಳೆ (ಉಪಾಧ್ಯಕ್ಷೆ) ತಲಾ 24 ಮತಗಳನ್ನು ಪಡೆದು ಆಯ್ಕೆಯಾದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನುಸುಯಾ ಅಸುಗಡೆ, ಕುಶಾಲ ವಾಗಮೋರೆ ಬಿಜೆಪಿ ಬೆಂಬಲಿತ 7 ಸದಸ್ಯರು ಮತ್ತು ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಜಗದೀಶ ಗುಡಗುಂಟಿ ಅವರ ಎರಡು ಮತಗಳು ಸೇರಿ 9 ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು. ಪೌರಾಯುಕ್ತ ಜ್ಯೋತಿ ಗಿರೀಶ್.ಎಸ್ ಇದ್ದರು.
ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪರಮಗೊಂಡ ಗವರೋಜಿ ಹಾಗೂ ರೇಖಾ ಕಾಂಬಳೆ ಬೆಂಬಲಿಗರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಕಡಿಮೆ ಇದರೂ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ನಾಡೋಜ ಜಗದೀಶ ಗುಡಗುಂಟಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ನಗರದ ಬಸ್ ನಿಲ್ದಾಣದಿಂದ ಉಮಾರಾಮೇಶ್ವರ ದೇವಸ್ಥಾನವರೆಗಿನ ಪ್ರಮುಖ ರಸ್ತೆ, ಜಿಜಿ ಹೆಸ್ಕೂಲ್‌ದಿಂದ ಬಸವ ಭವನದವರೆಗೆ ರಸ್ತೆ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು. ಇದರಿಂದಾಗಿ ಪಾದಚಾರಿಗಳು, ವಯೋವೃದ್ಧರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.