ಪಿಎನ್​ಜಿ ಅಳವಡಿಕೆಗೆ ನಗರಸಭೆ ಸದಸ್ಯರ ವಿರೋಧ

10-hvr-05
Published on

ಹಾವೇರಿ: ನಗರದಲ್ಲಿ ಸಿಲಿಂಡರ್ ಗ್ಯಾಸ್ ಬದಲಾಗಿ ಪೈಪ್​ಲೈನ್ ಮೂಲಕ ಪಿಎನ್​ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ನಗರಸಭೆಯಿಂದ ಆ ಯೋಜನೆಗೆ ಅನುಮತಿ ನೀಡುವ ಮೊದಲು ಬೇರೆ ನಗರದಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಿ ಸಾಧಕ-ಬಾಧಕ ಅವಲೋಕಿಸಿ ಬಳಿಕ ಅನುಮೋದನೆ ನೀಡಬೇಕು ಎಂದು ನಗರಸಭೆ ಸದಸ್ಯರು ಸೂಚಿಸಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಪಿಎನ್​ಜಿ ಸರಬರಾಜು ಯೋಜನೆಯ ಕುರಿತ ಚರ್ಚೆಯಲ್ಲಿ ಸದಸ್ಯರು ಮಾತನಾಡಿದರು.

ಎಜಿಪಿ ಸಿಟಿ ಗ್ಯಾಸ್ ಪ್ರೖೆ ಲಿ.,ನ ಮಾರುಕಟ್ಟೆ ಮುಖ್ಯಸ್ಥ ಸಂತೋಷ ಕುಲಕರ್ಣಿ ಹಾಗೂ ಮಂಜುನಾಥ ಮಾತನಾಡಿ, ಎಜಿಪಿ ಕಂಪನಿ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದಿದೆ. ಸಿಟಿ ಗ್ಯಾಸ್ ವಿತರಣೆಯಲ್ಲಿ ದೊಡ್ಡ ಸಂಸ್ಥೆಯಾಗಿದೆ. ಎಲ್​ಪಿಜಿ ಗ್ಯಾಸ್​ಗಿಂತ ಪಿಎನ್​ಜಿ ಅಗ್ಗವಾಗಿದೆ. ಪಿಎನ್​ಜಿ ಅಳವಡಿಸಿಕೊಂಡರೆ ಗ್ಯಾಸ್ ಖಾಲಿಯಾಗುವುದು ಇಲ್ಲವೇ ಸಿಲಿಂಡರ್ ಬುಕ್ ಮಾಡುವ ಚಿಂತೆ ಇರುವುದಿಲ್ಲ. ವಿದ್ಯುತ್​ನಂತೆಯೇ ಗ್ಯಾಸ್​ಗೂ ಬಿಲ್ ಜನರೇಟ್ ಆಗುತ್ತದೆ ಎಂದರು.

ಅಧ್ಯಕ್ಷ ಸಂಜೀವಕುಮಾರ ನೀರಲಗಿ ಪ್ರತಿಕ್ರಿಯಿಸಿ, 2006ರಲ್ಲಿ ನಗರದಲ್ಲಿ ಆರಂಭವಾಗಿರುವ ಯುಜಿಡಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 2016ರಲ್ಲಿ ಆರಂಭವಾಗಿರುವ 24*7ನೀರು ಪೂರೈಸುವ ಯೋಜನೆ ಮಂದಗತಿಯಲ್ಲಿ ಸಾಗಿದೆ. ಈ ಯೋಜನೆಗಳಿಂದ ನಗರದ ರಸ್ತೆಗಳು ಹಾಳಾಗಿವೆ. ಅದರಿಂದಾಗಿ ಇನ್ನೂ ತೊಂದರೆ ಅನುಭವಿಸುತ್ತಿದ್ದೇವೆ. ಈಗ ನೀವು ಗ್ಯಾಸ್ ಪೈಪ್​ಲೈನ್ ಅಳವಡಿಸುತ್ತೇವೆ ಎಂದು ರಸ್ತೆ, ಚರಂಡಿ ಹಾಳು ಮಾಡಿ ಅರ್ಧಕ್ಕೆ ಹೋದರೆ ಯಾರು ಹೊಣೆ ? ಎಂದು ಪ್ರಶ್ನಿಸಿದರು.

ಬಸವರಾಜ ಬೆಳವಡಿ ಮಾತನಾಡಿ, ಹಾವೇರಿ ಗ್ರಹಚಾರವೇ ಸರಿಯಿಲ್ಲ. ಇಲ್ಲಿ ಕೈಗೊಂಡಿರುವ ಯಾವ ಯೋಜನೆಗಳೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದೂ ಹಾಗಾಬಾರದು. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು. ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿ ರೀತಿಯಾಗುವುದಾದರೆ ಇದು ನಮಗೆ ಬೇಡವೇ ಬೇಡ ಎಂದರು.

ಆಗ ಎಜಿಪಿ ಸಿಟಿ ಗ್ಯಾಸ್ ಪ್ರೖೆ ಲಿ.,ನ ಮಾರುಕಟ್ಟೆ ಮುಖ್ಯಸ್ಥ ಸಂತೋಷ ಕುಲಕರ್ಣಿ, ಪಿಎನ್​ಜಿ ಪೈಪ್​ಲೈನ್ ಹಾಗೂ ಯಾವುದಾದರೂ ಪೈಪ್ ಹಾಳಾದರೆ ಅದರ ನಿರ್ವಹಣೆಯನ್ನು ನಾವೇ ಮಾಡುತ್ತೇವೆ. 8 ವರ್ಷದಲ್ಲಿ ಜಿಲ್ಲೆಯಲ್ಲಿ 2 ಲಕ್ಷ ಮನೆಗಳಿಗೆ ಪೈಪ್​ಲೈನ್ ಅಳವಡಿಸುವ ಗುರಿ ಹೊಂದಿದ್ದೇವೆ. ನಗರದಲ್ಲಿ ಮೊದಲ ಹಂತದಲ್ಲಿ ವಿದ್ಯಾನಗರ, ಅಶ್ವಿನಿನಗರ, ಬಸವೇಶ್ವರ ನಗರದ 5 ಸಾವಿರ ಮನೆಗಳಿಗೆ ಇದನ್ನು ಅನುಷ್ಠಾನಗೊಳಿಸುವ ಯೋಜನೆಯಿದೆ. ನಗರಸಭೆಯಿಂದ ಪರವಾನಗಿ ಕೊಟ್ಟರೆ 6 ತಿಂಗಳಲ್ಲಿ ಮನೆಗಳಿಗೆ ಪಿಎನ್​ಜಿ ಒದಗಿಸುತ್ತೇವೆ. ಪ್ರತಿ ಮನೆಯಿಂದ 6,750 ರೂ. ಮುಂಗಡ 250 ರೂ.ಗಳಂತೆ 27 ಕಂತುಗಳಲ್ಲಿ ತುಂಬಿಸಿಕೊಳ್ಳುತ್ತೇವೆ. ದೀರ್ಘ ಕಾಲದವರೆಗೆ ನಿರ್ವಹಣೆ ಮಾಡುತ್ತೇವೆ ಎಂದರು.

ಗಣೇಶ ಬಿಷ್ಟಣ್ಣನವರ ಮಾತನಾಡಿ, ನಗರಸಭೆಯಿಂದ ಸಮಿತಿ ರಚಿಸಿ ಈ ಕಂಪನಿಯವರು ಎಲ್ಲಿ ಕೆಲಸ ಮಾಡಿದ್ದಾರೋ ಅಲ್ಲಿಗೆ ಹೋಗಿ ಪರಿಶೀಲಿಸಿದ ನಂತರ ಅನುಮತಿ ನೀಡುವ ಕುರಿತು ತೀರ್ವನಿಸೋಣ ಎಂದರು. ಆಗ ಸದಸ್ಯೆ ಚನ್ನಮ್ಮ ಬ್ಯಾಡಗಿ ಮಾತನಾಡಿ, ಸಮಿತಿ ರಚಿಸೋದು ಬೇಡ, ಎಲ್ಲ ಸದಸ್ಯರನ್ನು ಕರೆದುಕೊಂಡು ಹೋಗಿ ಎಂದಾಗ ಎಲ್ಲರೂ ಸಮ್ಮತಿಸಿದರು.

ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ ಡಂಬಳ, ಉಪವಿಭಾಗಾಧಿಕಾರಿ, ಪೌರಾಯುಕ್ತ ಶಿವಾನಂದ ಉಳ್ಳಾಗಡ್ಡಿ ಇತರರಿದ್ದರು.

ನಗರದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪೈಪ್​ಲೈನ್ ಮೂಲಕ ಪಿಎನ್​ಜಿ ಸರಬರಾಜು ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಯೋಜನೆ ಅನುಷ್ಠಾನದ ಕುರಿತು ಸದಸ್ಯರಿಗೆ ಸಮರ್ಪಕ ಮಾಹಿತಿ ನೀಡಲು ಎಲ್ಲೆಲ್ಲಿ ಯೋಜನೆ ಜಾರಿಯಾಗಿದೆಯೋ ಅಲ್ಲಿಗೆ ಆಸಕ್ತ ಸದಸ್ಯರನ್ನು ಕರೆದೊಯ್ದು ಮಾಹಿತಿ ಕೊಡಿ. ಜತೆಗೆ ಸರ್ಕಾರದಿಂದಲೂ ಪರವಾನಗಿ ಪಡೆಯುವ ಕೆಲಸ ಮಾಡಿ. ಬಳಿಕ ಸಾಧಕ-ಬಾಧಕ ರ್ಚಚಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನ ಮಾಡೋಣ.|ನೆಹರು ಓಲೇಕಾರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net