

ಹರಿಹರ: ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ತಲುಪಿದಾಗ ಮಾತ್ರ ಯೋಜನೆ ಸಫಲತೆ ಕಾಣಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶೇ.5ರಷ್ಟು ಅನುದಾನದಲ್ಲಿ ಅಂಗವಿಕಲ ಅರ್ಹ ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗವಿಕಲರು ಸೇರಿ ದೈಹಿಕ ಅಂಗ ವೈಫಲ್ಯವುಳ್ಳವರು ಸಹ ಸಾಮಾನ್ಯರಂತೆ ಜೀವನ ನಡೆಸಬೇಕು ಎನ್ನುವ ದೃಷ್ಠಿಯಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸರ್ಕಾರದಿಂದ ಇರುವ ಹಲವಾರು ಯೋಜನೆಗಳು ಕೆಲವರಿಗೆ ಮಾತ್ರ ತಲುಪುತ್ತಿವೆ, ಬಹಳಷ್ಟು ಜನರಿಗೆ ಅದರ ಮಾಹಿತಿ ಇರುವುದಿಲ್ಲ. ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಸಾರ್ವಜನಿಕರಿಗೆ ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.
ಶ್ರವಣ ಸಾಧನ ಮಾತ್ರವಲ್ಲದೆ ಮಹಿಳೆಯರಿಗೆ ಹೊಲಿಗೆ ಯಂತ್ರ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಧನ ಮುಂತಾದವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಎಂ. ಜಂಬಣ್ಣ ಮಾತನಾಡಿ, ನಗರಸಭೆಯಿಂದ ಅಂಗವಿಕಲ ಅನುದಾನದಲ್ಲಿ 1.44 ಲಕ್ಷ ರೂ. ವೆಚ್ಚದಲ್ಲಿ ಶ್ರವಣ ದೋಷವುಳ್ಳ 17 ಜನರಿಗೆ ಶ್ರವಣ ಸಾಧನಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಸರ್ಕಾರ ಸಮಸ್ಯೆಯನ್ನರಿತು ಈ ಸಾಧನಗಳನ್ನು ನೀಡಿದ್ದು ಜಾಗರೂಕತೆಯಿಂದ ನಿರ್ವಹಣೆ ಮಾಡಿ ಎಂದು ಫಲಾನುಭವಿಗಳಿಗೆ ಕಿವಿ ಮಾತು ಹೇಳಿದರು.
ನಗರಸಭಾ ಸದಸ್ಯರಾದ ಎಂ.ಎಸ್. ಬಾಬುಲಾಲ್, ಆರ್.ಸಿ. ಜಾವೀದ್, ಪೌರಾಯುಕ್ತ ಪಿ. ಸುಬ್ರಹ್ಮಣ್ಯ ಶ್ರೇಷ್ಠಿ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಪಿ.ಆರ್. ಜಗದೀಶ್, ವಕೀಲ ಮಾರುತಿ ಬೇಡರ್ ಇತರರಿದ್ದರು.