

ಮಂಡ್ಯ: ನಗರದ ನೂರಡಿ ರಸ್ತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಅವರ ಹೆಸರಿಡುವ ವಿಷಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆಡಳಿತಾರೂಢ ಹಾಗೂ ವಿಪಕ್ಷದ ಸದಸ್ಯರು ನೂರಡಿ ರಸ್ತೆಗೆ ಮಹನೀಯರ ಹೆಸರಿಡುವ ಸಂಬಂಧ ಚರ್ಚೆ ನಡೆಸಿದರು. ಶ್ರೀಧರ್ ಮಾತನಾಡಿ, 1976ರ ಜೂ.15ರಂದು ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ನೂರಡಿ ರಸ್ತೆಗೆ ಹೆಸರಿಡುವ ಸಂಬಂಧ ಚರ್ಚೆಯಾಗಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಯರೂಪಕ್ಕೆ ಬಂದಿಲ್ಲ. 2024ರ ಡಿ.4ರಂದು ಅಧ್ಯಕ್ಷ ಎಂ.ವಿ.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸಂಪೂರ್ಣ ದಾಖಲಾತಿಗಳೊಂದಿಗೆ ಮುಂದಿನ ಸಭೆಗೆ ಮುಂದೂಡಲಾಗಿತ್ತು ಎಂದರು.
ಕಳೆದ ಮೇ.12ರಂದು ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಸದಸ್ಯ ಎಚ್.ಎಸ್.ಮಂಜು ಅವರು ಚರ್ಚಿಸಿ, ಇಬ್ಬರೂ ಮಹಾನ್ ವ್ಯಕ್ತಿಗಳ ಹೆಸರನ್ನು ರಸ್ತೆಗೆ ನಾಮಕರಣ ಮಾಡುವುದು ಸೂಕ್ಷ್ಮ ವಿಷಯ. ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಿ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಧರ್, ಇಬ್ಬರೂ ಮಹಾನ್ ನಾಯಕರ ಕೊಡುಗೆ ಅಪಾರ. ಶಾಸಕರು ತೀರ್ಮಾನ ಮಾಡಲಿ ಎಂದರು. ನಾಗೇಶ್ ಮಾತನಾಡಿ, ಇಲಾಖೆಯ ಅಧಿಕಾರಿಗಳಿಂದ ನೂರಡಿ ರಸ್ತೆಗೆ ಹೆಸರಿಡುವಲ್ಲಿ ವಿಳಂಬವಾಗಿದೆ. ಎಲ್ಲ ವಿಷಯದಲ್ಲೂ ಅಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ ಸಮುದಾಯಗಳ ನಡುವೆ ಪರಸ್ಪರ ವೈಮನಸ್ಸು ಬರಲು ಕಾರಣವಾಗಿದೆ ಎಂದರು.
ಎಲ್ಲರನ್ನೂ ಸಮಾಧಾನಪಡಿಸಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಎಲ್ಲರಿಗೂ ಅಧಿಕಾರ ಸಿಕ್ಕಿದೆ. ಹಾಗೆಯೇ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಬದುಕು ರೂಪಿಸಿದ್ದಾರೆ. ಇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಸಂಘರ್ಷ ಮಾಡುವುದು ಬೇಡ. ಹಾಗಾಗಿ ಡಾ.ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದವರೆಗಿನ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ಎಂದೂ, ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಗೌರಿಶಂಕರ ಸಮುದಾಯ ಭವನದವರೆಗಿನ ರಸ್ತೆಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಜೆ.ಸಿ ವೃತ್ತದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ, ಕಲ್ಲಹಳ್ಳಿ ಬಳಿ 2 ಎಕರೆ ಜಾಗದಲ್ಲಿ ಕೆಂಪೇಗೌಡರ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಅಂತಿಮವಾಗಿ ಎಂ.ವಿ.ಪ್ರಕಾಶ್ ಮಾತನಾಡಿ, ಶಾಸಕರು ತಮ್ಮ ಅಭಿಪ್ರಾಯವನ್ನು ಸಭೆಗೆ ತಿಳಿಸಿ ಸಲಹೆ ನೀಡಿದ್ದಾರೆ. ಈ ಸಂಬಂಧವಾಗಿ ಇಬ್ಬರು ಮಹನೀಯರ ಹೆಸರನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಅಂತಿಮವಾಗಿ ಯಾರ ಹೆಸರನ್ನು ಇಡಲು ಸೂಚಿಸುವುದೋ ಅವರ ಹೆಸರನ್ನು ನೂರಡಿ ರಸ್ತೆಗೆ ಇಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಪೌರಾಯುಕ್ತೆ ಪಂಪಾಶ್ರೀ ಇತರರಿದ್ದರು.