ನಗರಸಭೆ ಕಂಪ್ಯೂಟರ್ ಆಪರೇಟರ್‌ಗೆ ತರಾಟೆ

31-KGL-7
ಕೊಳ್ಳೇಗಾಲ ನಗರಸಭೆ ಕಚೇರಿಯಲ್ಲಿ ಪೌರಾಯುಕ್ತ ರಮೇಶ್ ಹಾಗೂ ಹೊರಗುತ್ತಿಗೆ ನೌಕರ ಮಹೇಶ್ ಅವರನ್ನು ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ತರಾಟೆಗೆ ತೆಗೆದುಕೊಂಡರು.
Published on

ಕೊಳ್ಳೇಗಾಲ: ಬಿ-ಖಾತೆ ನೀಡುವುದರಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ಕಂಪ್ಯೂಟರ್ ಆಪರೇಟರ್‌ಗೆ ಶುಕ್ರವಾರ ತರಾಟೆಗೆ ಕೊಂಡ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಕೆಲ ಕಾಲ ಗದ್ದಲ ಉಂಟಾಯಿತು.

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕೊಳ್ಳೇಗಾಲ ಶಾಖೆ ನಗರಸಭೆ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರವನ್ನು ಮೇ 27ರಂದು ಪ್ರಾರಂಭಿಸಿದ್ದರಿಂದ ನಗರಸಭೆ ಕಚೇರಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ನಡುವೆಯೂ ನಗರಸಭೆ ಆಡಳಿತ ಕಚೇರಿ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಅಧಿಕಾರಿಗಳು ಬಿ-ಖಾತೆ ವಿತರಣೆ ಇನ್ನಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

ಸುಮಾರು 12.30ರಲ್ಲಿ ಆಡಳಿತ ಕಚೇರಿ ಕೊಠಡಿಯಲ್ಲಿದ್ದ ಕಂಪ್ಯೂಟರ್ ಆಪರೇಟರ್ ಪುರುಷೊತ್ತಮ್ ಅವರನ್ನು ಬಿ-ಖಾತೆಗಾಗಿ ಸಾರ್ವಜನಿಕರ ಪರವಾಗಿ ನೀಡಿರುವ ಅರ್ಜಿ ಸಂಖ್ಯೆ 129, 130ಕ್ಕೆ ನಗರಸಭೆ ಆಯುಕ್ತರ ಆದೇಶವಾಗಿದ್ದರೂ ಬಿ-ಖಾತೆಯ ಪ್ರಿಂಟ್ ತೆಗೆದಿಲ್ಲ. ಆದರೆ, ಅರ್ಜಿ ಸಂಖ್ಯೆ 385ಕ್ಕೆ ಆಯುಕ್ತರ ಆದೇಶವಾಗದಿದ್ದರೂ ಪ್ರಿಂಟ್ ತೆಗೆದಿದ್ದೀರಿ. ಇದು ಹೇಗೆ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.

ನಾನೊಬ್ಬ ಉಪಾಧ್ಯಕ್ಷನಾಗಿ ಸಾರ್ವಜನಿಕರ ಕೆಲಸವನ್ನು ಮಾಡಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಸಿನೀಯರಿಟಿ ಇರುವ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡಿ ಆದೇಶವಾಗದ ಅರ್ಜಿಗೆ ಹೇಗೆ ಖಾತೆ ಪ್ರಿಂಟ್ ತೆಗೆದಿರುವಿರಿ ಎಂದು ಅಕ್ರೋಶ ಹೊರಹಾಕಿದ್ದಲ್ಲದೆ ನಗರಸಭೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಏಕೆ ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿದ್ದೀರಿ, ಹೋಗಿ ಪ್ರತಿಭಟಿಸುವಂತೆ ಖಾರವಾಗಿ ಹೇಳಿದರು.

ಈ ವೇಳೆ ಪಕ್ಕದ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ನಗರಸಭೆ ಆಯುಕ್ತ ಎ.ರಮೇಶ್ ಹಾಗೂ ಹೊರಗುತ್ತಿಗೆ ನೌಕರ ಡೇಟಾ ಎಂಟ್ರಿ ಆಪರೇಟರ್ ಮಹೇಶ್ ಬಳಿ ತೆರಳಿದ ಎ.ಪಿ.ಶಂಕರ್ ಪ್ರತಿಭಟನೆ ಬಿಟ್ಟು ಏಕೆ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಜೋರು ಮಾಡಿದರು. ನಾವೇನು ಖಾತೆ ಕೆಲಸ ಮಾಡುತ್ತಿದ್ದೀವಾ, ಆಫೀಸ್ ಕೆಲಸ ಮಾಡುತ್ತಿದ್ದೇವೆ ಎಂದು ಆಯುಕ್ತರು ಅಸಮಾಧಾನ ಹೊರಹಾಕಿ ಹೊರ ಹೋದರು. ಈ ವೇಳೆ ಮಹೇಶ್‌ನನ್ನು ಪ್ರತಿಭಟನೆ ನಡೆಯುತ್ತಿದ್ದರೂ ಏಕೆ ಕಂಪ್ಯೂಟರ್ ಆನ್ ಮಾಡಿದ್ದೀಯಾ ಎದ್ದು ಹೊರಗೆ ನಡೆ, ಬೇಕಾದಾಗ ಕೆಲಸ ಮಾಡುತ್ತೀರಾ ಎಂದು ಗದರಿ ಹೊರಗೆ ಕಳುಹಿಸಿದರು. ಈ ಘಟನಾವಳಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟೀಕೆ ವ್ಯಕ್ತವಾಗಿತ್ತು.

ಉಪಾಧ್ಯಕ್ಷ ಎ.ಪಿ.ಶಂಕರ್ ಮೇಲೆ ದೂರು:

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ವಿರುದ್ಧ ಕ್ರಮವಹಿಸುವಂತೆ ಪಟ್ಟಣದ ಮಹರ್ಷಿ ವಾಲ್ಮೀಕಿ ಯುವ ಪಡೆ ಅಧ್ಯಕ್ಷ ಮಹೇಶ್ ಪೌರಯುಕ್ತ ಎ.ರಮೇಶ್ ಅವರಿಗೆ ಶನಿವಾರ ದೂರು ನೀಡಿದ್ದಾರೆ. ಮೇ 30ರಂದು ಮಧ್ಯಾಹ್ನ 1.30ರಲ್ಲಿ ನಗರಸಭೆ ಪೌರಯುಕ್ತರಾದ ನಿಮಗೂ ಹಾಗೂ ಪರಿಶಿಷ್ಟ ಪಂಗಡದ ಹೊರಗುತ್ತಿಗೆ ನೌಕರರ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುವ ಮಹೇಶ್ ಹಾಗೂ ಕಿರಣ ಅವರಿಗೆ ಎ.ಪಿ ಶಂಕರ್ ಅವರು ಬೆದರಿಕೆ ಹಾಕಿ ಕೆಲಸ ನಿರ್ವಹಿಸದಂತೆ ಹೇಳಿದ್ದಾರೆ. ಹೊಡೆಯುತ್ತೇನೆ. ಬಡಿಯುತ್ತೇನೆಂದು ಹೆದರಿಸಿ ದೌರ್ಜನ್ಯ ವ್ಯಸಗಿದ್ದಾರೆ. ಇವರ ನಡವಳಿಕೆಯಿಂದ ನೌಕರರು ಭಯಭೀತರಾಗಿ ಕೆಲಸ ನಿರ್ವಹಿಸಲು ಹೆದರುತ್ತಿದ್ದಾರೆ. ಹಾಗಾಗಿ ಎ.ಪಿ.ಶಂಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಪಂಗಡದ ನೌಕರರಿಗೆ ಬೆದರಿಸಿ ದೌರ್ಜನ್ಯ ಎಸಗಿರುವ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಕ್ಕೆ ಹಾಗೂ ಎಸ್ಸಿ, ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಬೇಕು ಎಂದು ಪೌರಾಯುಕ್ತರಿಗೆ ದೂರು ನೀಡಿದ್ದಾರೆ. ಈ ವೇಳೆ ಶ್ರೀನಿವಾಸ್, ರಮೇಶ್, ಕಾಂತರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net