

ಮಂಡ್ಯ: ಅಂಗಡಿಗಳ ಮೇಲೆ ಅಳವಡಿಸಿರುವ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷೃ ವಹಿಸಿದರೆ ಲೈಸನ್ಸ್ ರದ್ದುಗೊಳಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಎಚ್ಚರಿಕೆ ನೀಡಿದರು.
ನಗರದಲ್ಲಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂದು ಕನ್ನಡ ಸೇನೆ ಸಂಘಟನೆಯಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ತಕ್ಷಣ ವರ್ತಕರೊಂದಿಗೆ ಸಭೆ ನಡೆಸಿ ಆದೇಶ ಮಾಡಲಾಗುವುದು. ಒಂದು ವೇಳೆ ಉಲ್ಲಂಘಿಸಿದರೆ ಲೈಸನ್ಸ್ ರದ್ದು ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ ಮಾತನಾಡಿ, ಕಳೆದ ಐದಾರು ತಿಂಗಳಿಂದ ನಮ್ಮ ಸಂಘಟನೆಯಿಂದ ಎಂಟು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದಾಗ್ಯೂ ಶೇ.40ರಷ್ಟು ನಾಮಫಲಕ ಬದಲಾವಣೆ ಆಗಿದೆ. ತಕ್ಷಣ ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆದೇಶ ಪಾಲನೆ ಮಾಡದೆ ಇರುವ ವರ್ತಕರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ, ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯುತ್ತಿರುವ ಈ ಸಂದರ್ಭದಲ್ಲಿ ತಕ್ಷಣ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಅತಿ ಹೆಚ್ಚು ಕನ್ನಡ ಮಾತಾಡುವ ಮಂಡ್ಯ ಜಿಲ್ಲೆಯಲ್ಲಿ ಇಂತಹ ಸ್ಥಿತಿಯಾದರೆ, ಗಡಿ ಭಾಗದ ಕನ್ನಡಿಗರ ಗತಿ ಏನು?. ತಕ್ಷಣ ನಗರಸಭೆ ಆಡಳಿತ ಮಂಡಳಿ ಇತ್ತ ಗಮನ ಹರಿಸಬೇಕು. ಒಂದು ವೇಳೆ ನಾಮಫಲಕ ಬದಲಾವಣೆಯಾಗದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭಾ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ವಿ.ನಟರಾಜ್, ಕನ್ನಡ ಸೇನೆಯ ರಾಜ್ಯ ಮುಖಂಡ ಹನುಮಂತಪ್ಪ, ಸಂಚಾಲಕ ಜಿ.ಮಹಾಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮ್ನಾಯಕನಹಳ್ಳಿ ಮಂಜು, ಮಂಡ್ಯ ತಾಲೂಕು ಅಧ್ಯಕ್ಷ ಸತೀಶ್ ಇದ್ದರು