

ಹುಬ್ಬಳ್ಳಿ : ಮಹಾನಗರ ಪಾಲಿಕೆ ನೌಕರರಿಗೂ ಏಳನೇ ವೇತನ ಆಯೋಗ ಸೌಲಭ್ಯ ದೊರೆಯಬೇಕು ಹಾಗೂ ಇನ್ನಿತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಪಾಲಿಕೆಯ ಹುಬ್ಬಳ್ಳಿ ಮುಖ್ಯ ಕಚೇರಿ ಆವರಣದಲ್ಲಿ ನೌಕರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವೂ ಮುಂದುವರೆಯಿತು.
ಪ್ರತಿಭಟನಾಕಾರರು ಬುಧವಾರವೂ ಪಾಲಿಕೆ ಆಯುಕ್ತರ ಕಚೇರಿ ಸೇರಿದಂತೆ ಉಳಿದ ಕಚೇರಿಗಳಿಗೆ ಬೀಗ ಹಾಕಿ, ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ಧಿ ಸಚಿವರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿರಿಸಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಸೌಜನ್ಯಕ್ಕೂ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಮಹಾನಗರ ಪಾಲಿಕೆ ವೃಂದ ಹಾಗೂ ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಸೂಚನೆಯನ್ನು ಪ್ರಕಟಿಸಬೇಕು. ನೌಕರರಿಗೂ ಕೆ.ಜಿ.ಐ.ಡಿ., ಜಿ.ಪಿ.ಎ ಸೌಲಭ್ಯ ನೀಡಬೇಕು. ಸಂಜೀವಿನಿ ಯೋಜನೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮಹಾಪೌರರಾದ ಜ್ಯೋತಿ ಪಾಟೀಲ ಹಾಗೂ ಉಪ ಮಹಾಪೌರ ಸಂತೋಷ ಚವ್ಹಾಣ ಅವರು ಪ್ರತಿಭಟನಾಕಾರರನ್ನು ಭೇಟಿ ಮಾಡಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಸಾಳುಂಕೆ, ಅಶೋಕ ಹಲಗಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.