

ಹರಿಹರ: ಕಾಲಹರಣ ಮಾಡದೆ ಅರ್ಜಿದಾರರಿಗೆ ಕೂಡಲೇ ಬಿ- ಖಾತಾ ಉತಾರಗಳನ್ನು ವಿತರಣೆ ಮಾಡಬೇಕೆಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಸಿಬ್ಬಂದಿಗೆ ತಾಕೀತು ಮಾಡಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಬಿ- ಖಾತಾ ವಿತರಣೆ ಮಾಡಿ ಮಾತನಾಡಿ, ಯೋಜನೆ ಆರಂಭವಾದಾಗಿನಿಂದ ಈವರೆಗೆ ಬಿ- ಖಾತೆಗೆ 826 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 112 ಅರ್ಜಿಗಳನ್ನು ಅನುಮೋದಿಸಲಾಗಿದೆ. ಅಂದರೆ ಶೇ.13.56 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಅನಾವಶ್ಯಕವಾಗಿ ಒಂದು ಅರ್ಜಿಯನ್ನೂ ಉಳಿಸಿಕೊಳ್ಳದೆ ವಿತರಣೆ ಮಾಡಿ ಎಂದು ಸೂಚಿಸಿದರು.
15 ವರ್ಷದ ಇಸಿ, ನೋಂದಣಾಧಿಕಾರಿ ಕಚೇರಿಯ ಪತ್ರ, ಮಾಲೀಕರ ಹಾಗೂ ಆಸ್ತಿಯ ಫೋಟೋ, ಒಂದು ವರ್ಷದ ದುಪ್ಪಟ್ಟು ಕಂದಾಯ ಪಾವತಿ ರಶೀದಿ, ಆಧಾರ್ ಕಾರ್ಡ್ ಪ್ರತಿ ಈ ದಾಖಲೆಗಳೊಂದಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು. ನೀರಿನ ಕಂದಾಯ ರಸೀದಿ ಕಡ್ಡಾಯವಲ್ಲ ಎಂದರು.
ಶೇ.5 ರಿಯಾಯಿತಿ: 2025-26ನೇ ಸಾಲಿನ ಆಸ್ತಿಗಳ ತೆರಿಗೆ ಪಾವತಿಯನ್ನು ಏ.31 ರೊಳಗೆ ಮಾಡುವ ಆಸ್ತಿ ಮಾಲೀಕರಿಗೆ ಶೇ.5 ರಷ್ಟು ರಿಯಾಯಿತಿ ನೀಡಲಾಗಿದೆ. ನಗರದ ಆಸ್ತಿ ಮಾಲೀಕರು ಈ ಯೋಜನೆ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಎಂ. ಜಂಬಣ್ಣ, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ, ಸದಸ್ಯರಾದ ಕೆ.ಜಿ. ಸಿದ್ದೇಶ್, ಎಸ್.ಎಂ. ಬಾಬುಲಾಲ್, ರಜನೀಕಾಂತ್, ಸೈಯದ್ ಅಬ್ದುಲ್ ಅಲೀಂ, ಕಂದಾಯ ಅಧಿಕಾರಿ ನಿರಂಜನಿ, ರಮೇಶ್ ಹಾಗೂ ಸಿಬ್ಬಂದಿ ಇದ್ದರು.