

ಹರಿಹರ: ಕೆಎಚ್‌ಬಿ ಕಾಲನಿಯ ಮೂಲಸೌಕರ್ಯಗಳ ಸಮಸ್ಯೆಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಸ್.ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ನಗರದ ಕೆಎಚ್‌ಬಿ ಹಿತರಕ್ಷಣಾ ಸಮಿತಿಯ ಮನವಿ ಮೇರೆಗೆ ಕೆಎಚ್‌ಬಿ ಕಾಲನಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆ ಆಲಿಸಿದರು.
ಕಾಲನಿ ಸೇರಿದಂತೆ ಎಲ್ಲ ವಾರ್ಡ್‌ಗಳಲ್ಲಿ ಅನೇಕ ಸಮಸ್ಯೆಗಳಿವೆ. ಆದ್ಯತೆಯ ಮೇರೆಗೆ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿ ಪಟ್ಟಿ ಮಾಡಲಾಗಿದ್ದು, ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ರಸ್ತೆಗಳಿಗೆ ಡಾಂಬರೀಕರಣ ಜತೆಗೆ ಗುರುತಿಸಲಾದ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಜಂಬಣ್ಣ ಮಾತನಾಡಿ, ನಗರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ. ಸಾರ್ವಜನಿಕರ ಸಹಕಾರದೊಂದಿಗೆ ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಆರೋಗ್ಯ ನಿರೀಕ್ಷಕ ಎಂ.ಬಿ. ರವಿ ಪ್ರಕಾಶ, ಕೆಎಚ್‌ಬಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್. ನಿಜಗುಣ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾದವಾಡ, ಜಂಟಿ ಕಾರ್ಯದರ್ಶಿ ರಾಮಮೂರ್ತಿ, ಉಪಾಧ್ಯಕ್ಷ ಜಿ.ಕೆ. ಮಲ್ಲಿಕಾರ್ಜುನ , ಕೋಶಾಧಿಕಾರಿ ಪರಶುರಾಮ ಗೌಳಿ ಇದ್ದರು