ನಗರಪಾಲಿಕೆ ಆಯುಕ್ತರ ಕಚೇರಿ ಪೀಠೋಪಕರಣ ಜಪ್ತಿ

MCC
Published on

ಮೈಸೂರು: ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ನೀಡಿದ ಆದೇಶ ಪಾಲನೆ ಮಾಡದ ನಗರಪಾಲಿಕೆ ಆಯುಕ್ತರ ಕಚೇರಿ ಪೀಠೋಪಕರಣಗಳನ್ನು ಶುಕ್ರವಾರ ಜಪ್ತಿ ಮಾಡಲಾಯಿತು.

ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಘಟಕ ಸ್ಥಾಪಿಸುವ ಸಲುವಾಗಿ ಮೈಸೂರು ತಾಲೂಕಿನ ರಮ್ಮನಹಳ್ಳಿಯ ವಿವಿಧ ಸರ್ವೇ ನಂಬರ್‌ನ ಒಟ್ಟು 45 ಎಕರೆ ಜಮೀನು ವಶಪಡಿಸಿಕೊಂಡಿದ್ದರು. 1994ರಲ್ಲಿ ಘಟಕಕ್ಕಾಗಿ ಭೂಸ್ವಾಧೀನ ಮಾಡಿಕೊಂಡು ಪ್ರತಿ ಎಕರೆಗೆ 45 ಸಾವಿರ ರೂ.ಪರಿಹಾರ ಕೊಡುವುದಾಗಿ ಹೇಳಿತ್ತು. ಆದರೆ, ಪರಿಹಾರ ಹಣ ಸಾಕಾಗುವುದಿಲ್ಲ ಎಂದು ಭೂಮಿ ಕಳೆದುಕೊಂಡ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2021ರಲ್ಲಿ ಹೆಚ್ಚಿನ ಪರಿಹಾರ ನೀಡಲು ಆದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಪರಿಹಾರ ನೀಡಲು ಪಾಲಿಕೆ ವಿಳಂಬ ಮಾಡಿದೆ.

ಇದರಿಂದ ಭೂಮಿ ಕಳೆದುಕೊಂಡ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶ ಪಾಲಿಸದ ಪಾಲಿಕೆ ಅಧಿಕಾರಿಗಳ ವಿರುದ್ಧ ಆಡಳಿತ ಕಚೇರಿ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ರೈತರು ಹಾಗೂ ನ್ಯಾಯಾಲಯದ ಸಿಬ್ಬಂದಿ ಆಯುಕ್ತರ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದರು.

ರೈತ ಮುಖಂಡ ಮಹದೇವ್ ಮಾತನಾಡಿ, ಭೂಮಿ ಕಳೆದುಕೊಂಡವರಿಗೆ ಪ್ರತಿ ಎಕರೆಗೆ 16 ಲಕ್ಷ ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಪಾಲಿಕೆ ಯಾವುದೇ ಹಣವನ್ನು ಸಂಪೂರ್ಣವಾಗಿ ನೀಡಿಲ್ಲ. ಅರ್ಧ ಹಣವನ್ನು ಮಾತ್ರ ಪಾವತಿಸಿದ್ದು, ಉಳಿದ ಹಣ ನೀಡಲು ಸತಾಯಿಸುತ್ತಿತ್ತು. ಹಾಗಾಗಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ತಿಳಿಸಿದರು.

ಅಂತಿಮವಾಗಿ ನಗರಪಾಲಿಕೆ ಆಯುಕ್ತರು ಇನ್ನಿತರೆ ಅಧಿಕಾರಿಗಳು, ರೈತರೊಂದಿಗೆ ಸಂಧಾನ ನಡೆಸಿ ಉಳಿಕೆ ಹಣ ನೀಡಲು ಸಮಯಾವಕಾಶ ಕೋರಿದ್ದಲ್ಲದೇ ಶೀಘ್ರ ಹಣ ನೀಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಜಪ್ತಿ ಮಾಡಿದ್ದ ಪೀಠೋಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಬಿಟ್ಟು ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net