ಸಾರ್ವಜನಿಕ ಆಸ್ಪತ್ರೆಗೆ ಪುರಸಭೆ ಅಧ್ಯಕ್ಷೆ ದಿಢೀರ್ ಭೇಟಿ

8blrp1
Published on

ಬೇಲೂರು: ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳಿಗೆ ವಿತರಿಸುವ ಊಟ ಮತ್ತು ಸ್ವಚ್ಛತೆ ಪರಿಶೀಲಿಸಿ ಸ್ವತಃ ತಾವೇ ಊಟ ಮಾಡಿ ಇನ್ನಷ್ಟು ಗುಣಮಟ್ಟದಲ್ಲಿ ವಿತರಿಸುವಂತೆ ತಿಳಿಸಿದರು.


ಮೀನಾಕ್ಷಿ ವೆಂಕಟೇಶ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬಹುತೇಕ ಬಡವರು, ಮಧ್ಯಮ ವರ್ಗದವರೇ ಬರುವುದು. ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತಾಗಬೇಕು. ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ಹಾಗೂ ಸಿಬ್ಬಂದಿ ಸೌಜನ್ಯದಿಂದ ಮಾತನಾಡಿಸಬೇಕು. ಔಷಧ, ಮಾತ್ರೆಗಳಿಗೆ ಹೊರಗೆ ಚೀಟಿ ಬರೆದು ಕೊಡದೆ ಆಸ್ಪತ್ರೆಯಲ್ಲಿ ಸಿಗುವ ಔಷಧ, ಮಾತ್ರೆಗಳನ್ನು ಬರೆದುಕೊಡಬೇಕು ಎಂದು ತಿಳಿಸಿದರು.


ರೋಗಿಗಳಿಗೆ ಊಟದ ಜತೆಗೆ ಅನ್ನ, ಸಾಂಬರ್, ಮೊಟ್ಟೆ ಹಾಗೂ ಬಾಳೆಹಣ್ಣು ಕೊಡುತ್ತಿದ್ದಾರೆ. ನಾನು ಊಟ ಮಾಡಿ ನೋಡಿದಾಗ ಪರವಾಗಿಲ್ಲ ಎನಿಸಿತು. ಆದರೆ ಸ್ವಚ್ಛತೆ ಮಾತ್ರ ಇನ್ನಷ್ಟು ಸುಧಾರಿಸಬೇಕಿದೆ. ಜತೆಗೆ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇಲ್ಲ, ಅದಕ್ಕೆ ಒತ್ತು ನೀಡಬೇಕಿದೆ. ಊಟ, ತಿಂಡಿಗೆ ಇಂತಿಷ್ಟು ಹಣ ಎಂದು ನಾಮಫಲಕ ಹಾಕಿಲ್ಲ. ಅದನ್ನು ಹಾಕಿಸುವಂತೆ ಆಸ್ಪತ್ರೆ ವೈದ್ಯಾಧಿಕಾರಿಗೆ ತಿಳಿಸಿದ್ದೇವೆ. ಅವರೂ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.


ಪುರಸಭೆ ಸದಸ್ಯೆ ಉಷಾ, ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ, ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net