ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಅನುದಾನ: ನಗರಸಭೆ ಬಜೆಟ್ ಮಂಡಿಸಿದ ಅಧ್ಯಕ್ಷ ಎಂ.ವಿ.ಪ್ರಕಾಶ್

Municipal budget presentation Mandya
Published on

ಮಂಡ್ಯ: ಆಮೆಗತಿಯಲ್ಲಿ ನಡೆಯುತ್ತಿರುವ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ನಗರಸಭೆ ಬಜೆಟ್‌ನಲ್ಲಿ 2.10 ಕೋಟಿ ರೂ ಅನುದಾನ ನೀಡಲಾಗಿದೆ. ಜತೆಗೆ ಉದ್ಯಾನಗಳ ಅಭಿವೃದ್ಧಿ ಹಾಗೂ ನಗರ ಹಸರೀಕರಣ, ಆಟೋ ಮತ್ತು ಬಸ್ ನಿಲ್ದಾಣದ ಜತೆಗೆ ಮೂಲ ಸೌಕರ್ಯಕ್ಕೆ ಆದ್ಯತೆ ಕೊಡಲಾಗಿದೆ.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. ಸ್ವಂತ ಸಂಪನ್ಮೂಲ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾಗುವ ಅನುದಾನವನ್ನು ಮುಂದುವರೆದ ಹಾಗೂ ಹೊಸ ಕಾಮಗಾರಿ, ನಿರ್ವಹಣೆ ಜತೆಗೆ ಹೊಸ ಯೋಜನೆ ಅನುಷ್ಠಾನಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ರಸ್ತೆ, ಕಲ್ಲು ಹಾಸು, ಪಾದಚಾರಿ ಮಾರ್ಗ, ಚರಂಡಿ, ಸೇತುವೆ ಮತ್ತು ಇತರೆ ಸ್ಥಿರಾಸ್ತಿ ಕಾಮಗಾರಿಗೆ 26.18 ಕೋಟಿ ರೂ ಮೀಸಲಿರಿಸಲಾಗಿದೆ. ಒಳಚರಂಡಿ ಮಾರ್ಗ ಮತ್ತು ಮಿಷಿನ್ ಹೋಲ್ ದುರಸ್ತಿ, ನಿರ್ವಹಣೆ ಮತ್ತು ನಿರ್ಮಾಣ ಕಾಮಗಾರಿಗೆ 6.50 ಕೋಟಿ ರೂ, ವೃತ್ತ ಹಾಗೂ ರಸ್ತೆಗೆ ನಾಮಫಲಕ ಅಳವಡಿಕೆ ಹಾಗೂ ಡಿಜಿಟಲ್ ಡಿಸ್ ಪ್ಲೇ ಬೋರ್ಡ್ ಅಳವಡಿಕೆಗೆ 1.45 ಕೋಟಿ, ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಾಮಗಾರಿಗೆ 4.05 ಕೋಟಿ ರೂ, ಪೌರಕಾರ್ಮಿಕರಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಮನೆ ನಿರ್ಮಾಣಕ್ಕೆ 2.57 ಕೋಟಿ ರೂ. ಗಿಡ ನೆಡುವುದು ಹಾಗೂ ರಕ್ಷಣೆ ಮಾಡಲು 15 ಲಕ್ಷ ರೂ, ನಿರಾಶ್ರಿತರ ತಂಗುದಾಣ ನಿರ್ವಹಣೆಗೆ 15 ಲಕ್ಷ ರೂ, ಬೀದಿದೀಪಗಳ ನಿರ್ವಹಣೆ ಹಾಗೂ ಹೊಸ ದೀಪಗಳ ಅಳವಡಿಕೆಗೆ 2.45 ಕೋಟಿ ರೂ, ಉದ್ಯಾನದಲ್ಲಿ ಪಾದಚಾರಿ ಮಾರ್ಗ ನಿರ್ಮಾಣ, ಲಘು ವ್ಯಾಯಮ ಸಾಧನ ಹಾಗೂ ಮಕ್ಕಳ ಆಟಿಕೆ ಅಳವಡಿಸಿ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲು 2.30 ಕೋಟಿ ರೂ, ಸ್ಮಶಾನದ ಅಭಿವೃದ್ಧಿ ಹಾಗೂ ಆಧುನಿಕ ವಿದ್ಯುತ್/ಅನಿಲ ಚಿತಾಗಾರ ನಿರ್ಮಾಣಕ್ಕೆ 4.50 ಕೋಟಿ ರೂ, ನಗರಸಭೆ ಸದಸ್ಯರ ಗೌರವಧನ, ಪ್ರವಾಸ ಕಾರ್ಯಕ್ರಮದ ಜತೆಗೆ ಇತರೆ ವೆಚ್ಚಕ್ಕೆ 80 ಲಕ್ಷ ರೂ, ಮಂಡ್ಯ ನಗರ ಸಮಗ್ರ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು 20 ಲಕ್ಷ ರೂ, ಬೀದಿನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಹಾಗೂ ರೇಬಿಸ್ ಚುಚ್ಚುಮದ್ದು ಹಾಕುವ ಉದ್ದೇಶಕ್ಕೆ 60 ಲಕ್ಷ ರೂ, ಸಮುದಾಯ ಹಾಗೂ ಸಾರ್ವಜನಿಕ ಶೌಚಗರಹ ನಿರ್ವಹಣೆ ಮತ್ತು ನಿರ್ಮಾಣ ಉದ್ದೇಶಕ್ಕೆ 25 ಲಕ್ಷ ರೂ, ನಮ್ಮ ಕ್ಲಿನಿಕ್ ನಿರ್ವಹಣೆ ಮತ್ತು ಔಷಧ ಖರೀದಿಗಾಗಿ 12.50 ಲಕ್ಷ ರೂ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.

ಶಾಸಕ ರವಿಕುಮಾರ್ ಗಣಿಗ, ಉಪಾಧ್ಯಕ್ಷ ಅರುಣ್‌ಕುಮಾರ್, ಪೌರಾಯುಕ್ತೆ ಪಂಪಾಶ್ರಿ ಇತರರಿದ್ದರು.

ಹೊಸ ಯೋಜನೆ ಅನುಷ್ಠಾನಕ್ಕೆ ಚಿಂತನೆ

ನಗರಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಅಮೃತ್ 2.0 ಯೋಜನೆಯಡಿ ಮಹಾತ್ಮಗಾಂಧಿ ಉದ್ಯಾನವನ, ಬಿವಿಕೆ ಬಡಾವಣೆಯಲ್ಲಿರುವ ಉದ್ಯಾನವನ್ನು 75 ಲಕ್ಷ ರೂ, ಹಾಲಹಳ್ಳಿ ಉದ್ಯಾನಕ್ಕೆ 25 ಲಕ್ಷ ರೂ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಇದಲ್ಲದೆ ಹಲವು ಉದ್ಯಾನದ ಅಭಿವೃದ್ಧಿಗೆ 2 ಕೋಟಿ ರೂ ಮೀಸಲಿರಿಸಲಾಗಿದೆ.

ಇದಲ್ಲದೆ 3 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕೌನ್ಸಿಲ್ ಸಭಾಂಗಣ ನಿರ್ಮಾಣ, ಮಾದರಿ ಆಟೋ ನಿಲ್ದಾಣ ನಿರ್ಮಾಣ, ಬಸ್ ಬೇ ಹಾಗೂ ನಿಲ್ದಾಣದ ಅಭಿವೃದ್ಧಿಗೆ ಅನುದಾನ, 1 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ, ಯತ್ತಗದಹಳ್ಳಿ ರಸ್ತೆಯಲ್ಲಿರುವ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ, ನಂದಾ ವೃತ್ತದಿಂದ ಕಾಳಿಕಾಂಭ ದೇವಸ್ಥಾನದವರೆಗೆ ತಡೆಗೋಡೆ ನಿರ್ಮಾಣಕ್ಕೆ 35 ಲಕ್ಷ ರೂ, ಕಾರ್ಯನಿರತ ಕಲಾವಿದರಿಗಾಗಿ 3 ಲಕ್ಷ ರೂ ಸಹಾಯಧನ ಕಾಯ್ದಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net