

ಗುಳೇದಗುಡ್ಡ: ಪುರಸಭೆಯ ಪ್ರಸಕ್ತ ಸಾಲಿನ ಆಯವ್ಯಯ ಸಭೆಯನ್ನು ಕಾನೂನು ಬಾಹಿರವಾಗಿ ಕರೆಯಲಾಗಿದೆ ಎಂದು ಪುರಸಭೆ ಸದಸ್ಯರು ವಿರೋಧಿಸಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಿದ ಘಟನೆ ಶುಕ್ರವಾರ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ, ಬಜೆಟ್ ಸಭೆಯನ್ನು ಯಾರ ಅಪ್ಪಣೆ ಪಡೆದು ಕರೆದಿದ್ದೀರಿ? ನಿಮಗೆ ಸಭೆ ಕರೆಯಲು ಅಧ್ಯಕ್ಷರು ಅನುಮತಿ ನೀಡಿದ್ದಾರೆಯೇ? ಸಭೆ ನಡೆಸುವ ಕರಡುಪ್ರತಿಯನ್ನೂ ಸದಸ್ಯರಿಗೆ ನೀಡಿಲ್ಲ ಎಂದು ಸದಸ್ಯರಾದ ವಿಠ್ಠಲ ಕಾವಡೆ, ರಫಿಕ್ ಕಲ್ಬುರ್ಗಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಪುರಸಭೆ ಅಧ್ಯಕ್ಷರ ಆಯ್ಕೆ ಮಾ.20ರಂದು ಕೋರ್ಟ್ ಆದೇಶದನ್ವಯ ರದ್ದಾಗಿತ್ತು. ಹೀಗಾಗಿ ಉಪಾಧ್ಯಕ್ಷರು ಪ್ರಭಾರಿ ಅಧ್ಯಕ್ಷರಾಗುವುದು ಕಾನೂನಿನಲ್ಲಿ ಅವಕಾಶವಿದ್ದು, ಮಾರ್ಚ ಒಳಗಡೆಯೇ ಬಜೆಟ್ ಸಭೆ ನಡಯಬೇಕಾಗಿರುವುದರಿಂದ ಮಾ.25ರಂದು ಸಭೆ ನೆಡೆಸಲು ನೋಟಿಸ್ ಜಾರಿಮಾಡಲಾಗಿತ್ತು. ಆದರೆ, ಉಪಾಧ್ಯಕ್ಷರು ಪ್ರಭಾರಿ ಅಧ್ಯಕ್ಷರ ಸ್ಥಾನ ವಹಿಸಿದ್ದಿಲ್ಲ. ಆದರೆ, ಕೋರ್ಟ್ ಆದೇಶಕ್ಕೆ ಮಾ. 27ರಂದು ಸ್ಟೇ ತಂದಿರುವುದರಿಂದ ಮೊದಲಿದ್ದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಸಲು ನಿರ್ಧರಿಸಲಾಯಿತು ಎಂದರು.
ಅಧ್ಯಕ್ಷರ ಅಪ್ಪಣೆ ಇಲ್ಲದೇ ಸಭೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಏಕ ಪಕ್ಷೀಯವಾಗಿ ನೀವು ನಿರ್ಧಾರ ತೆಗೆದುಕೊಂಡು ಸಭೆ ಕರೆದಿದ್ದೀರಿ. ಇದು, ಕಾನೂನು ಬಾಹಿರವಾಗಿದ್ದು, ಸಭೆ ಮುಂದೂಡುವಂತೆ ಸದಸ್ಯರು ಆಗ್ರಹಿಸಿದರು.
ಪುರಸಭೆಯ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಅವರು ಬಜೆಟ್ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ಬಳಿಕ ಠರಾವು ಬರೆಯುವಾಗಲೂ ಮುಖ್ಯಾಧಿಕಾರಿ ಹಾಗೂ ಸದಸ್ಯರ ನಡುವೆ ಠರಾವು ಹೀಗೆಯೇ ಬರೆಯಬೇಕು ಎಂದು ವಾಗ್ವಾದ ನಡೆಯಿತು.
ಪುರಸಭೆ ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ಸದಸ್ಯರಾದ ಸಂತೋಷ ನಾಯನೇಗಲಿ, ಪ್ರಶಾಂತ ಜವಳಿ, ಯಲ್ಲಪ್ಪ ಮನ್ನಿಕಟ್ಟಿ, ಉಮೇಶ ಹುನಗುಂದ, ಕಾಶೀನಾಥ ಕಲಾಲ, ವಿನೋದ ಮದ್ದಾನಿ, ವಿದ್ಯಾ ಮುರಗೋಡ, ರಾಜವ್ವ ಹೆಬ್ಬಳ್ಳಿ, ಜ್ಯೋತಿ ಆಲೂರ, ನಾಗರತ್ನಾ ಲಕ್ಕುಂಡಿ, ರಾಜೇಶ್ವರಿ ಉಂಕಿ, ಸುಮಿತ್ರಾ ಕೋಡಬಳಿ, ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ, ಎಂ.ಜಿ. ಕಿತ್ತಲಿ ಮತ್ತಿತರರಿದ್ದರು. ನಾಲ್ವರು ಸದಸ್ಯರು ಗೈರಾಗಿದ್ದರು.